ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮರಳು ಕಳ್ಳರ ವಿರುದ್ಧ ಕ್ರಿಮಿನಲ್ ಖಟ್ಲೆ!

Lingaraj Badiger
Updated On : 27 Jun 2013, 10:59 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.26
ಜಿಲ್ಲೆಯ ಜೀವನದಿಗಳಾದ ಭೀಮಾ, ಕಾಗಿಣಾ ಹಾಗೂ ಕಮಲಾವತಿ ಒಡಲಲ್ಲಿ ಅವ್ಯಾಹತವಾಗಿ ಸಾಗಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು, ಮರಳು ಮಾಫಿಯಾ ವಿರುದ್ಧ ಅಂಕುಶ ಪ್ರಯೋಗಿಸಲು ಕೊನೆಗೂ ಜಿಲ್ಲಾಡಳಿತ ಮುಂದಾಗಿದೆ.
ಅನಧಿಕೃತ ಮರಳು ಗಣಿಗಾರಿಕೆ, ಸಾಗಾಣಿಕೆ ತಡೆಗಟ್ಟಲು ಜಿಲ್ಲಾ ಮರಳು ಮಾನಿಟರಿಂಗ್ ಸಮಿತಿಯನ್ನು ರಚಿಸಲಾಗಿದ್ದು, ಆ ಸಮಿತಿಯಿಂದ ಕಟ್ಟುನಿಟ್ಟಿನ ಕ್ರಮ, ಜಿಲ್ಲೆಯ ಮೂರು ಪ್ರಮುಖ ನದಿ ಹಾಗೂ ಅವುಗಳ ಉಪನದಿ ಅಥವಾ ಹಳ್ಳಗಳಲ್ಲಿ ಯಾಂತ್ರಿಕ ದೋಣಿ ಅಥವಾ ಇನ್ನಾವುದೇ ಯಂತ್ರ(ಜೆಸಿಬಿ ಮತ್ತು ಹಿಟಾಚಿ) ಬಳಕೆ ಮಾಡಿ ಮರಳು ತೆಗೆಯುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾನೂನು ಬಾಹಿರ ಕ್ರಮವಾಗಿ ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್ ಮರಳು ಸಮಿತಿಯ ಚರ್ಚೆಗಳು, ನಡಾವಳಿಗಳನ್ನು ಒಳಗೊಂಡಿರುವ ಪತ್ರಿಕಾ ಹೇಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ.
ಜಿಲ್ಲೆಯಲ್ಲಿನ ಅಕ್ರಮ ಮರಳು ದಂಧೆಯ ಕುರಿತಂತೆ 'ಕನ್ನಡಪ್ರಭ' ತನ್ನ ರಾಜ್ಯ ಮಟ್ಟದ ಹಾಗೂ ಸ್ಥಳೀಯ ಸರಣಿ ವರದಿಗಳ ಮೂಲಕ ಬಹಿರಂಗಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕ್ರಿಮಿನಲ್ ಖಟ್ಲೆ: ಯಾಂತ್ರಿಕ ದೋಣಿ ಅಥವಾ ಇನ್ನಾವುದೇ ಯಂತ್ರ ಬಳಕೆ ಮಾಡಿ ಮರಳು ತೆಗೆಯುವುದು ಅಥವಾ ನದಿಗಳ ಪಾತ್ರದಲ್ಲಿ ನಿಲ್ಲಿಸಿರುವುದು ಕಂಡುಬಂದಲ್ಲಿ ಅವುಗಳನ್ನು ಜಪ್ತಿ ಮಾಡಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಕಟ್ಟುನಿಟ್ಟಿನ ಸೂಚನೆಯನ್ನು ಜಿಲ್ಲಾ ಮರಳು ಸಮಿತಿಗೆ ನೀಡಲಾಗಿದೆ ಎಂದು ಪ್ರಸನ್ನಕುಮಾರ್ ಹೇಳಿದ್ದಾರೆ.
ರಾತ್ರಿ ಮರಳು ಸಾಗಿಸುಂವತಿಲ್ಲ: ಅನಧಿಕೃತ ಮರಳು ಗಣಿಗಾರಿಕೆ, ಸಾಗಾಣಿಕೆ ಹಾಗೂ ಅಪಘಾತಗಳನ್ನು ತಡೆಗಟ್ಟುವ ದೃಷ್ಟಿಯಿಂದ ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 221(ಎ)(5)ರಡಿ ಗುಲ್ಬರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸಂಜೆ 5ರಿಂದ ಬೆಳಗಿನ 6ರವರೆಗೆ ಮರಳು ಸಾಗಾಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಈ ಅಧಿಸೂಚನೆ ತಕ್ಷಣದಿಂದ ಅಂದರೆ ಜೂ.25ರಿಂದ ಜು.24ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ನಿಷೇಧಿತ ಸಮಯದಲ್ಲಿ ಸಂಚರಿಸಿದ ವಾಹನಗಳನ್ನು ಜಪ್ತಿ ಮಾಡಿ ವಾಹನದ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತಾಲೂಕು- ಹೋಬಳಿ ಮಟ್ಟದಲ್ಲಿ ನಿಗಾ: ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಆರ್‌ಟಿಒ, ಪೊಲೀಸ್, ಲೋಕೋಪಯೋಗಿ, ಕಂದಾಯ, ಅರಣ್ಯ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಮರಳು ಮಾನಿಟರಿಂಗ್ ಸಮಿತಿಯ ಎಲ್ಲ ಸದಸ್ಯರು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.
ಈಗಾಗಲೇ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ರಚಿಸಲಾಗಿರುವ ಮರಳು ಮಾನಿಟರಿಂಗ್ ಸಮಿತಿಯ ತಂಡಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ರಾತ್ರಿ ವೇಳೆಯಲ್ಲಿ ಮರಳು ಸಾಗಾಣಿಕೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಹೇಳಿದ್ದಾರೆ.

ಅಂಕುಶ ಬೀಳುವುದೇ?
ಅವ್ಯಾಹತವಾಗಿ ಸಾಗಿದ್ದ ಅಕ್ರಮ ಮರಳುಗಾರಿಕೆಯ ಬಗ್ಗೆ ಕೊನೆಗೂ ಜಿಲ್ಲಾಡಳಿತ ಮೌನ ಮುರಿದಿದೆ. ಆದರೆ ಈ ದಂಧೆ ಮೇಲೆ ಕಾನೂನು ಅಂಕುಶ ಪರಿಣಾಮಕಾರಿಯಾಗಿ ಪ್ರಯೋಗವಾಗಬೇಕಷ್ಟೆ. ಹೀಗಾದಲ್ಲಿ ಮಾತ್ರ ನದಿ ಪಾತ್ರದ ಮರಳು ಉಳಿಯುತ್ತದೆ ಎಂಬುದು ಜಿಲ್ಲೆಯ ಜನರ ಅಭಿಮತ. 2011ರಲ್ಲಿ ಮರಳು ಬ್ಲಾಕ್ ಹರಾಜು ಮಾಡಿ ಕೈ ಕಟ್ಟಿ, ಬಾಯಿ ಮುಚ್ಚಿಕೊಂಡು ಕುಳಿತಿದ್ದ ಜಿಲ್ಲಾಡಳಿತ ಈಗ ತುಸು ಮಾತನಾಡಿದೆ. ಇದೀಗ ತಾನು ನುಡಿದಂತೆ ನಡೆಯುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement