'ಖಾತ್ರಿ' ಅಕ್ರಮ ಬಗ್ಗೆ ತನಿಖೆ ಆರಂಭ
ಗುಲ್ಬರ್ಗ: ಇಲ್ಲಿನ ಜಿಪಂ ಎಂಜಿನಿಯರಿಂಗ್ ವಿಭಾಗದಲ್ಲಿ ನೀರು ಸರಬರಾಜು ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಉದ್ಯೋಗ ಖಾತ್ರಿ ಯೋಜನೆಯ ನಿರ್ದೇಶಕ ಮುನೀಷ ಮೌದ್ಗಿಲ್ ತನಿಖೆ ಕೈಗೊಂಡಿದ್ದಾರೆ.
ಎಕ್ಸಿಕ್ಯುಟಿವ್ ಎಂಜಿನಿಯರ್ ಭೀಮಕ್ಕನವರ್ ಅವಧಿಯಲ್ಲಿ ವ್ಯಾಪಕ ಅವ್ಯವಹಾರಗಳು ನಡೆದಿರುವ ಬಗ್ಗೆ ದೂರುಗಳು ಬಂದಿದ್ದರಿಂದ ಸರ್ಕಾರ ತನಿಖೆಗೆ ಆದೇಶಿಸಿದ್ದು, ಮೌದ್ಗಿಲ್ ಅವರು ಮಂಗಳವಾರ ಗುಲ್ಬರ್ಗಕ್ಕೆ ಆಗಮಿಸಿ ಎಂಜಿನಿಯರಿಂಗ್ ವಿಭಾಗದ ಕಚೇರಿಯ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಯಾರೂ ಪ್ರವೇಶಿಸದಂತೆ ಪೊಲೀಸ್ ಭದ್ರತೆಯಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಪ್ರಸನ್ನಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಈ ಸಂದರ್ಭದಲ್ಲಿದ್ದರು. ಈ ಮಧ್ಯೆ ಭೀಮಕ್ಕನವರ್ ರಜೆ ಮೇಲೆ ತೆರಳಿದ್ದಾರೆಂದು ತಿಳಿದು ಬಂದಿದೆ.
ಖುದ್ದು ಸ್ಥಳ ಪರಿಶೀಲನೆ: ಜಿಪಂ ಎಂಜಿನಿಯರಿಂಗ್ ವಿಭಾಗದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರುಗಳು ಬಂದಿದ್ದರಿಂದ ತನಿಖೆ ನಡೆಸಲಾಗಿದೆ. ಕಾಮಗಾರಿ ನಡೆಸದೇ ಬಿಲ್ ಪಾವತಿ ಬಗ್ಗೆ ಖುದ್ದು ಸ್ಥಳ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಖಾತ್ರಿ ಯೋಜನೆಯ ನಿರ್ದೇಶಕ ಮುನೀಷ ಮೌದ್ಗಿಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ನೀರು ಪೂರೈಕೆ, ರಸ್ತೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಕಾಮಗಾರಿ ನಡೆಸದೇ ಬಿಲ್ ಪಾವತಿ ಮಾಡಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶಿಸಿದ್ದು, ಗುತ್ತಿಗೆದಾರರೂ ಇಲ್ಲ, ಕಾಮಗಾರಿಯೂ ನಡೆಸಿಲ್ಲ. ಆದರೆ, ಬಿಲ್ ಮಾತ್ರ ಪಾವತಿಯಾಗಿದೆ. ಒಂದೇ ಕೆಲಸ ಹಲವು ಬಾರಿ ಕೈಗೊಂಡು ಬಿಲ್ ಎತ್ತಲಾಗಿದೆ. ತುಂಡು ಗುತ್ತಿಗೆ ನೀಡಿ ಹಣ ನಿಯಮ ಉಲ್ಲಂಘಿಸಲಾಗಿದೆ ಎಂಬ ದೂರುಗಳು ಬಂದಿವೆ. ನಕಲಿ ಬಿಲ್ ಸಹಿ: ದೂರುಗಳನ್ನು ಹಿಡಿದುಕೊಂಡು ಖುದ್ದು ಸ್ಥಳ ಪರಿಶೀಲನೆ ಮಾಡಿದಾಗ ಇದು ದೃಢಪಟ್ಟಿದೆ ಎಂದು ತಿಳಿಸಿದರು.
ಈ ಬಗ್ಗೆ ಎಂಜಿನಿಯರಿಂಗ್ ವಿಭಾಗ ಆಡಿಟ್ ಮಾಡಬೇಕೆಂದು ಈ ಹಿಂದೆ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಿಂದೆ ಭೀಮಕ್ಕನವರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದು ಅಮಾನತುಗೊಂಡಿದ್ದರು.
ಕೊಠಡಿಗೆ ಪೊಲೀಸ್ ಭದ್ರತೆ: ಜಿಪಂ ಎಂಜಿನಿಯರಿಂಗ್ ವಿಭಾಗದ ಕಚೇರಿಯ ಮುಖ್ಯದ್ವಾರಕ್ಕೆ ಬೀಗ ಹಾಕಿ ಪರಿಶೀಲನೆ ನಡೆಸಿರುವುದು ಒಂದೆಡೆಯಾದರೆ, ನೀರು ಸರಬರಾಜು ಮಾಡುವ ಯೋಜನೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಒಂದು ಕೋಣೆಯಲ್ಲಿ ಇಟ್ಟು ಅವುಗಳಿಗೆ ಸೀಲ್ ಹಾಕಲಾಗಿದೆ.