ಪಿಡಿಒ ವಜಾಕ್ಕೆ ಆಗ್ರಹ
ಆಳಂದ: ಸಾಮಾನ್ಯ ಸಭೆ ಕರೆದು ಕಾರಣ ತಿಳಿಸದೆ ವಿನಾಕಾರಣ ಗೈರು ಆಗಿ ಸದಸ್ಯರಿಗೆ ಅಪಮಾನಗೊಳಿಸಿರುವ ತಾಲೂಕಿನ ಸಾವಳೇಶ್ವರ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ವಜಾಗೊಳಿಸಿ ಕ್ರಮ ಜರುಗಿಸುವಂತೆ ಉಪಾಧ್ಯಕ್ಷ ಸೇರಿ ಆರು ಮಂದಿ ಸದಸ್ಯರು ತಾಪಂ ಇಒ ಅವರಿಗೆ ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ. ತನ್ನ ಜವಾಬ್ದಾರಿಯನ್ನು ಧಿಕ್ಕರಿಸಿ ಗ್ರಾಪಂ ಸದಸ್ಯರನ್ನು ಅವಮಾನ ಮಾಡಿದ ಮತ್ತು ಪಂಚಾಯಿತಿಗೆ ಬಾರದ ಪಿಡಿಒ ಅಂಬಾರಾಯ ವಿರುದ್ಧ ಕರ್ತವ್ಯ ಲೋಪದಡಿ ಕ್ರಮ ಜರುಗಿಸಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ. ವಾರದಲ್ಲಿ ಪಿಡಿಒವನ್ನು ತೆಗೆಯದೆ ಹೋದಲ್ಲಿ ಪಂಚಾಯತ್ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷೆ ನಾಗಮ್ಮ ಪೂಜಾರಿ, ರಾಜೇಂದ್ರ ಝಳಕಿ, ಶ್ರೀಕಾಂತ ಝಳಕಿ, ಹಜರತ್ ಪಟೇಲ್, ಸರುಬಾಯಿ ಕಾಂಬಳೆ, ಹವಳಾಬಾಯಿ ಅವರು ಸಲ್ಲಿಸಿದ ದೂರಿನಲ್ಲಿ ಎಚ್ಚರಿಸಿದ್ದಾರೆ.