ಮರಳಲ್ಲಿ ಹರಾಜಾದ ಜಿಲ್ಲಾಡಳಿತ ಮಾನ!
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜೂ.27
'ಊರು ಕೊಳ್ಳೆ ಹೊಡೆದ್ಮ್ಯಾಗ ದಿಡ್ಡಿ ಬಾಗ್ಲ ಹಾಕಿದ್ರು...' ಅಂತಾರಲ್ಲ, ಹಂಗಾಯ್ತು ಡಿಸಿ ಸಾಹೇಬರ ಮರಳು ದಂಧೆ ವಿರುದ್ಧದ ನಿಷೇಧ- ಕಾನೂನು ಕ್ರಮದ ಗುಡುಗು.
ಭೀಮಾ, ಕಾಗಿಣಾ, ಕಮಲಾವತಿ ಪಾತ್ರದಲ್ಲಿನ ಸಾವಿರಾರು ಮೆಟ್ರಿಕ್ ಟನ್ ತೂಕದ ಮರಳೆಲ್ಲ ಮುಳ್ಳು, ಪೊದೆಗಳಲ್ಲೋ, ಮನೆ ಆವರಣದಲ್ಲೋ, ಖಾಲಿ ನಿವೇಶನಗಳಲ್ಲೋ ದಾಸ್ತಾನು ಮಾಡಿರುವ ಕಳ್ಳರಿಗೆ ಜಿಲ್ಲಾಡಳಿತದ ಆದೇಶದಿಂದ ಎಷ್ಟರ ಮಟ್ಟಿಗಿ ಬಿಸಿ ತಟ್ಟಲು ಸಾಧ್ಯ?
ಜಿಲ್ಲಾಡಳಿತಕ್ಕೆ ಮರ್ಯಾದೆ ಪ್ರಶ್ನೆ: ಅಕ್ರಮ ಮರಳುಗಾರಿಕೆಗೆ ಅಂಕುಶ ಹಾಕುವಲ್ಲಿ ಜಿಲ್ಲಾಡಳಿತ ವಿಳಂಬವಾಗಿ ಕ್ರಮಕ್ಕೆ ಮುಂದಾಗಿದೆ ಎಂದು ಜಿಲ್ಲೆಯಾದ್ಯಂತ ಜನತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಳೆದ 2 ತಿಂಗಳಿಂದಂತೂ ಮರಳು ನಿಕ್ಷೇಪದ ಅಕ್ರಮ ಸಾಗಾಟ ಅವ್ಯಾಹತವಾಗಿತ್ತು.
ಹಾಡುಹಗಲೇ ವಾಹನಗಳಲ್ಲಿ ಮರಳನ್ನು ತುಂಬಿಕೊಂಡು ಪಕ್ಕದ ಮಹಾರಾಷ್ಟ್ರ, ಹೈದ್ರಾಬಾದ್ಗಳಿಗೆ ಎಗ್ಗಿಲ್ಲದೆ ಸಾಗಿಸುತ್ತಿರುವುದನ್ನು ನೋಡಿಯೂ ನೋಡದಂತೆ ತಮ್ಮ ಪಾಡಿಗಿದ್ದ ಜಿಲ್ಲಾಡಳಿತ ಈಗ ಮಳೆ ಶುರುವಾಗುವ ಹೊತ್ತಿಗೆ ಎಚ್ಚೆತ್ತುಕೊಂಡಿದೆ. ಇದು ಜಿಲ್ಲಾಡಳಿತದ ಮರ್ಯಾದೆ ಉಳಿಸಿಕೊಳ್ಳುವ ಪ್ರಯತ್ನ ಎಂದು ಜನರೇ ಆಡಿಕೊಳ್ಳುವಂತಾಗಿದೆ.
ಕೂಡಿಟ್ಟ ಮರಳು ಮುಟ್ಟುಗೋಲು ಹಾಕಲಿ: ಈಗ ಮಳೆಗಾಲ ಶುರುವಾಗಿದೆ, ಹೊಳೆಯಲ್ಲಿ ನೀರು ಬರುತ್ತದೆ. ಈ ಹಂತದಲ್ಲಿ ಮರಳುಗಾರಿಕೆ ಅಸಾಧ್ಯ. ಅದೆಲ್ಲ ಗೊತ್ತಿದ್ದೇ ಜಿಲ್ಲಾಡಳಿತ ನದಿಪಾತ್ರದಲ್ಲಿ ಯಂತ್ರಗಳು ಕಂಡಲ್ಲಿ ಮುಟ್ಟುಗೋಲು ಹಾಕಿಕೊಳ್ಳುವ, ಮರಳು ಸಾಗಣೆ ನಡೆದರೆ, ಅದು ರಾತ್ರಿ ಹೊತ್ತಲ್ಲಿ ನಡೆದಲ್ಲಿ ಕ್ರಿಮಿನಲ್ ಖಟ್ಲೆ ಹೂಡುವ ಮಾತುಗಳನ್ನಾಡಿದೆ.
ಮರಳುಗಳ್ಳರು ಈಗಾಗಲೇ ಬಹುಕೋಟಿ ಮೌಲ್ಯದ ಮರಳನ್ನು ದಾಸ್ತಾನು ಮಾಡಿಟ್ಟಿದ್ದಾರೆ. ಜಿಲ್ಲಾಡಳಿತಕ್ಕೆ ಮರಳು ಅಕ್ರಮಕ್ಕೆ ಅಂಕುಶ ಹಾಕುವ ನಿಜವಾದ ಕಳಕಳಿ ಇದ್ದಲ್ಲಿ ದಾಸ್ತಾನು ಹುಡುಕಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಿ. ಹೀಗೆ ಮುಟ್ಟುಗೋಲು ಹಾಕಿಕೊಂಡ ಮರಳನ್ನು ಮನೆ ಕಟ್ಟುವ ನಿಜವಾದಂತಹ ಗ್ರಾಹಕರಿಗೆ ಸೂಕ್ತ ಬೆಲೆಗೆ ನೀಡಲಿ ಎಂದು ಜನ ಸವಾಲು ಎಸೆದಿದ್ದಾರೆ.
ಮರಳು ಅಕ್ರಮ ಅನಿಯಂತ್ರಿತವಾಗಿ ಸಾಗಿದೆ. ಜಿಲ್ಲಾಡಳಿತದ ಮೂಗಿನ ಅಡಿಯಲ್ಲೇ ಅಕ್ರಮ ಸಾಗಿದ್ದರೂ ಯಾರೂ ಏನೂ ಮಾಡಲಾಗುತ್ತಿಲ್ಲ ಎಂದು ನಿತ್ಯವೂ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದಕ್ಕೆ ಜಿಲ್ಲಾಡಳಿತ ಕ್ರಮದ ಮಾತುಗಳನ್ನಾಡಿದೆ ಅಷ್ಟೆ. ಇಂತಹ ಹೇಳಿಕೆಗಳಿಂದ ಏನನ್ನೂ ಸಾಧಿಸಲಾಗದು ಎಂದು ಜನತೆ ಜಿಲ್ಲಾಧಿಕಾರಿ ಹೇಳಿಕೆ, ಜಿಲ್ಲಾ ಮರಳು ಸಮಿತಿಯ ನಡಾವಳಿಗಳನ್ನೇ ನಂಬದಂತಹ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗಿರುವುದು ದುರಂತ.
ಅಕ್ರಮ ಮರಳಿಂದ ಹಳ್ಳಿ ರಸ್ತೆಗಳೆಲ್ಲ ಹಾಳು: ಅಕ್ರಮ ಮರಳು ವಾಹನಗಳು ಹೆಚ್ಚಿನ ತೂಕದೊಂದಿಗೆ, ವೇಗದಲ್ಲಿ ಹಳ್ಳಿಗಾಡಲ್ಲಿ ಓಡಾಡುತ್ತಿರುವುದರಿಂದ ಅಲ್ಲಿನ ಸಂಪರ್ಕ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಅಫಜಲ್ಪುರ ತಾಲೂಕಿನ ಮಣ್ಣೂರ- ಕರ್ಜಗಿ, ಶೇಷಗಿರಿವಾಡಿ, ಉಡಚಣ, ಕೂಡಿಗನೂರ್, ಶಿವೂರ್ ರಸ್ತೆಗಳು, ಮಣ್ಣೂರ- ಕರ್ಜಗಿ- ಅಫಜಲ್ಪುರ ಸಂಪರ್ಕ ಕಲ್ಪಿಸುವ 35 ಕಿ.ಮೀ. ಉದ್ದದ ರಸ್ತೆ ಹದಗೆಟ್ಟು ಹೋಗಿದೆ.
ಇನ್ನು ಗಾಣಗಾಪುರ, ಇಟಗಾ, ಘತ್ತರ್ಗಾ ಭಾಗದಲ್ಲಿಯೂ ಮರಳು ಲಾರಿಗಳಿಂದ ರಸ್ತೆಗಳು ಹಾಳಾಗಿ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಜೇವರ್ಗಿಯ ರದ್ದೇವಾಡಗಿ, ಕೋಳಕೂರ್, ಕೋಬಾಳ, ಹರವಾಳ ಇಲ್ಲೆಲ್ಲಾ ರಸ್ತೆಗಳು ಕುಳಿಬಿದ್ದು ಹಾಳಾಗಿದ್ದರೂ ಕೇಳುವವರಿಲ್ಲ. ಹೆಚ್ಚಿನ ತೂಕದೊಂದಿಗೆ ವಾಹನಗಳು ಸಂಚರಿಸುತ್ತಿದ್ದರೂ ಪೊಲೀಸ್, ಆರ್ಟಿಒ ಕ್ಯಾರೆ ಎನ್ನುತ್ತಿಲ್ಲ.
ಮೊದ್ಲೆ ಸಿಡಿದೇಳಲಿಕ್ಕೆ ಡಿಸಿಗೆ ಬೇಡ ಅಂದಿದ್ರಾ?
ಮರಳು ಲೂಟಿಯಾಗುತ್ತಲೇ ಇತ್ತು. ಈ ಸಂಗತಿ ಗೊತ್ತಿದ್ದರೂ ಕಳ್ಳತನದ ಮರಳು ಪ್ರಕರಣದಲ್ಲಿನ ವಾಹನಗಳನ್ನು ಬಿಟ್ಟುಬಿಡುವಂತೆ ಜಿಲ್ಲಾಧಿಕಾರಿ, ಎಸಿ ಇಬ್ಬರೂ ಮೌಖಿಕವಾಗಿ ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಿ ಸಿಕ್ಕಿಬಿದ್ದಿದ್ದಾರೆ. ಈಗ ಅಕ್ರಮಕ್ಕೆ ಮೂಗುದಾರ ಹಾಕಲು ಹೊರಟಿದ್ದಾರೆ. ಇದು ಜಿಲ್ಲಾಧಿಕಾರಿಯ ದ್ವಂದ್ವತನವಲ್ಲದೆ ಮತ್ತೇನು? ಯಾರ ಕಣ್ಣಿಗೆ ಮರಳು ಎರಚಲು ಹೊರಟಿದ್ದಾರೋ, ಜಿಲ್ಲೆಯ ಜನತೆ ಇವರ ಸಾಚಾತನ ಕಂಡಾಗಿದೆ. ಶೀಘ್ರ ಸಿಎಂ ಸಿದ್ದರಾಮಯ್ಯ ಅವರನ್ನು ಕಂಡು ಅಕ್ರಮ ಮರಳಿನ ರಾದ್ಧಾಂತ ವಿವರಿಸಿ ಕ್ರಮಕ್ಕೆ ಆಗ್ರಹಿಸುವೆ.
- ಎಸ್.ಕೆ. ಕಾಂತಾ, ಮಾಜಿ ಸಚಿವರು, ಹೋರಾಟಗಾರ, ಗುಲ್ಬರ್ಗ
ಜಿಲ್ಲಾಧಿಕಾರಿ ಮಾತು ನಂಬಲಾಗದು
ಜಿಲ್ಲಾಧಿಕಾರಿ ಮಾತು ನಂಬಲಿಕ್ಕೇ ಆಗದಂತಾಗಿದೆ. 3 ತಿಂಗಳ ಮುಂಚೆಯೇ ರ್ಯಾಲಿ ಮಾಡಿ 'ಕುಡಿಯುವ ನೀರು ಉಳಿಸಿ, ಮರಳು ಅಕ್ರಮ ತಪ್ಪಿಸಿ' ಎಂದು ರೈತರೊಂದಿಗೆ ಜಾಥಾ ಮಾಡಿದ್ದಾಗಲೇ ಈ ಕಳವಿನ ದಂಧೆಗೆ ನಿಯಂತ್ರಣ ಹೇರಲು ಆಗ್ರಹಿಸಿದ್ದೇವು. ಆಗ ಸುಮ್ಮನಿದ್ದು, ಈಗ ಕ್ರಮದ ಮಾತನ್ನಾಡುತ್ತಿದ್ದಾರೆ. ರೈತರು, ಜನರು, ಹೋರಾಟಗಾರರ ಆಗ್ರಹಗಳಿಗೆ ಕಿಮ್ಮತ್ತೇ ಇಲ್ಲವೆ? ಇನ್ನಾದರೂ ಕಳ್ಳರ ವಿರುದ್ಧ ಕ್ರಮಕ್ಕೆ ಪ್ರಾಮಾಣಿಕವಾಗಿ ಮುಂದಾಗುವ ಬುದ್ಧಿ ಇವರಿಗೆ ಬೇಗ ಬರಲಿ.
- ಗೋಪಾಲರಾವ ಗುಡಿ, ಹೋರಾಟಗಾರ
ದಾಸ್ತಾನು ವಶಪಡಿಸಿಕೊಳ್ಳಲಿ
ದಾಸ್ತಾನು ಮಾಡಿರುವ ಬಹುಕೋಟಿ ಮೌಲ್ಯದ ಮರಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಧೈರ್ಯ ಜಿಲ್ಲಾಡಳಿತ ಪ್ರದರ್ಶಿಸಲಿ. ಕಳ್ಳರಿಗೆ ಸ್ಪಷ್ಟ ಸಂದೇಶ ರವಾನಿಸಲಿ. ಇದು ಕ್ರಮಾಧಾರಿತ ಕಾರ್ಯಾಚರಣೆಗೆ ಸಕಾಲ, ಜಿಲ್ಲಾಡಳಿತ ಯಾರ ಮುಲಾಜಿಗೋ ಸುಮ್ಮನಿದ್ದು ಬರುವ ದಿನಗಳಲ್ಲಿ ಮರಳು ಅಕ್ರಮ ಹಾಗೆ ಹಸಿರು ಚಿಗುರುವಂತೆ ಅನುಕೂಲ ಮಾಡಬಾರದು.
- ಅರುಣ ಪಾಟೀಲ್, ಜೈಕರವೇ ಅಧ್ಯಕ್ಷ
ಪಿಐಎಲ್ಗೆ ಆಗ್ರಹಿಸುವೆ
ಜಿಲ್ಲೆಯ ಅಕ್ರಮ ಮರಳು ದಂಧೆ ಬಳ್ಳಾರಿ ಗಣಿಗಿಂತಲೂ ದೊಡ್ಡದು. ಜಿಲ್ಲೆಯ ಮರಳು ದಂಧೆಯ ಅಕ್ರಮಗಳನ್ನೆಲ್ಲ ವಿವರಿಸುವ ದಾಖಲೆಗಳು, ಫೋಟೋಗಳನ್ನು ಕಲೆಹಾಕಲಾಗಿದೆ. ಮುಖ್ಯ ನ್ಯಾಯಮೂರ್ತಿಗೆ ಕಂಡು ಮರಳು ಮಾಫಿಯಾ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಆಗ್ರಹಿಸುವೆ.
- ಕೇದಾರಲಿಂಗಯ್ಯ ಹಿರೇಮಠ, ರೈತಪರ ಹೋರಾಟಗಾರ, ಜೇವರ್ಗಿ