ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

31.59 ಕೋಟಿ ಕ್ರಿಯಾಯೋಜನೆಗೆ ಅಸ್ತು

Rashmi Kasaragodu
Updated On : 29 Jun 2013, 10:55 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜೂ.28
ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿ(ಬಿಆರ್ಜಿಎಫ್) ಯೋಜನೆಯಡಿ 2013- 14ನೇ ಸಾಲಿಗಾಗಿ 31.59 ಕೋಟಿಯ ಕ್ರಿಯಾಯೋಜನೆಗೆ ಗುರುವಾರ ನಗರದಲ್ಲಿ ಜಿಪಂ ಅಧ್ಯಕ್ಷ ಶರಣಪ್ಪ ಪಾಟೀಲ್ ತೇಲ್ಕೂರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
  ಕೇಂದ್ರ ಸರ್ಕಾರದಿಂದ ಬಂದಿರುವ 31.59 ಕೋಟಿಯಲ್ಲಿ ಸ್ಥಳೀಯ ತಾಲೂಕು ಪಂಚಾಯಿತಿಗಳಿಗೆ 505.44 ಲಕ್ಷ, ಗ್ರಾಮ ಪಂಚಾಯಿತಿಗಳಿಗೆ 1,769.04 ಲಕ್ಷ ಅನುದಾನ ಹಂಚಿಕೆ ಮಾಡಲಾಯಿತು.
  ಸ್ಥಳೀಯ ಸಂಸ್ಥೆಗಳು ಇನ್ನೂ ಅಸ್ತಿತ್ವದಲ್ಲಿ ಇಲ್ಲದೆ ಇರುವುದರಿಂದ ಅವುಗಳಿಗೆ ನೀಡುವ ಅನುದಾನವನ್ನು ಬೇರೆಯವರಿಗೆ ಹಂಚಿಕೆ ಮಾಡುವಂತೆ ಸಭೆಯಲ್ಲಿ ಒತ್ತಾಯ ಕೇಳಿ ಬಂದಾಗ ಹಾಗೆ ಮಾಡಲು ಬರುವುದಿಲ್ಲ. ನಿಯಮ ಪ್ರಕಾರವೇ ನೀಡಬೇಕಾಗುತ್ತದೆಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ ಮತ್ತು ಜಿಪಂ ಸಿಇಒ ಪಲ್ಲವಿ ಆಕುರಾತಿ ಹೇಳಿದರು.
ಸದಸ್ಯರ ಅಸಮಾಧಾನ: ಜಿಲ್ಲಾ ಯೋಜನಾ ಸಮಿತಿಯಲ್ಲಿ ಬಿಆರ್ಜಿಎಫ್ ಅನುದಾನದಡಿ ಕ್ರಿಯಾಯೋಜನೆ ರೂಪಿಸುವುದು ಮುಖ್ಯ ಮತ್ತು ಕಡ್ಡಾಯವಾಗಿದ್ದರೂ ಸದಸ್ಯರಿಗೆ ಮಾಹಿತಿಯನ್ನು ಕೊನೆಯ ಗಳಿಗೆಯಲ್ಲಿ ನೀಡಿ ಸಭೆಯನ್ನು ನಡೆಸಿ ಅನುಮೋದನೆ ಪಡೆದುಕೊಳ್ಳುತ್ತಿರುವುದಕ್ಕೆ ಜಿಪಂ ಸದಸ್ಯರು ಸೇರಿದಂತೆ ಡಿಪಿಸಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ತೆರೆನಾಗಿ ಮುಂದಿನ ಸಲ ಆಗದಂತೆ ಎಚ್ಚರಿಕೆ ವಹಿಸುವಂತೆ ಆಗ್ರಹಿಸಿದರು.
  ಅಲ್ಲದೆ ಗ್ರಾಪಂಗಳ ಜತೆಗೆ ಸೇರಿಕೊಂಡು ಯೋಜನೆಗಳನ್ನು ರೂಪಿಸಬೇಕೆಂದು ಸರ್ಕಾರದ ಸುತ್ತೋಲೆ ತಿಳಿಸಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೇಳಿದಾಗ ಜಿಪಂ ಸದಸ್ಯರು ಆಕ್ಷೇಪಿಸಿದರು. ಜಿಪಂ ಸದಸ್ಯರ ಅಧಿಕಾರಕ್ಕೆ ಕಡಿತ ಹಾಕುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ರಿಯಾಯೋಜನೆ ರಚನೆಗೆ ವಿರೋಧ: ಕ್ರಿಯಾಯೋಜನೆಯನ್ನು ರಚಿಸುವುದನ್ನು ಕೈಬಿಡಿ ಎಂದು ಸದಸ್ಯರಾದ ಶೋಭಾ ಬಾಣಿ, ಹರ್ಷಾನಂದ ಗುತ್ತೇದಾರ, ಸಂಜೀವನ್ ಯಾಕಾಪುರ, ಮತೀನ್ ಪಟೇಲ್, ಗುರುಲಿಂಗಪ್ಪಗೌಡ ಪಾಟೀಲ್, ಪ್ರಕಾಶ ಜಮಾದಾರ, ಮಂಜುಳಾ ಕುಸ್ತಿ ಮೊದಲಾವದರು ಆಗ್ರಹಿಸಿದರು.
  ಹೀಗೆ ವಿಳಂಬ ಮಾಡಿದ್ದರಿಂದ ಹಲವು ಅಕ್ರಮ ನಡೆದಿವೆ. ಅದಕ್ಕೆ ಅಧಿಕಾರಿಗಳೇ ಕಾರಣ ಎಂದು ಸದಸ್ಯರು ದೂರಿದರು. ಒಂದು ಕೆಲಸವನ್ನು ಜಿಪಂ ಮತ್ತು ಗ್ರಾಪಂ.ನವರು ತೆಗೆದುಕೊಳ್ಳಬಾರದೆಂಬ ಕಾರಣದಿಂದ ಎಲ್ಲರೂ ಸೇರಿಕೊಂಡೇ ಸಮಗ್ರ ಯೋಜನೆ ರೂಪಿಸುವ ಉದ್ದೇಶವಾಗಿದೆ ಎಂದು ಸಿಇಒ ಪಲ್ಲವಿ ಸ್ಪಷ್ಟಪಡಿಸಿದರು.
ಮನಸ್ಸಿಲ್ಲದೆ ಸದಸ್ಯರ ಒಪ್ಪಿಗೆ: ಇಷ್ಟಕ್ಕೂ ಸದಸ್ಯರು ತಣ್ಣಗಾಗಲಿಲ್ಲ, ನಿಮ್ಮ ಮನಸ್ಸಿಗೆ ಬಂದದ್ದು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದಾಗ, ಸಿಇಒ ಮಾತನಾಡಿ, ಹೀಗೆ ಮಾಡಿದರೆ ಅನುದಾನ ಖೋತಾ ಆಗುತ್ತದೆ. ಇಲ್ಲವೇ ಬರಲ್ಲ ಎಂದು ಹೇಳಿದಾಗ ಈ ಸಲ ಹಣಕ್ಕೆ ಕತ್ತರಿ ಬೀಳಬಾರದು ಎಂದು ಮನಸ್ಸು ಒಪ್ಪದೆ ಒಪ್ಪಿಗೆ ನೀಡುತ್ತೇವೆ ಎಂದು ಶೋಭಾ ಬಾಣಿ ಹೇಳಿದಾಗ ಇತರರು ಸಹಮತ ವ್ಯಕ್ತಪಡಿಸಿ ಮುಂದೆ ನಿಯಮಗಳನ್ನು ಬದಲಿಸಬೇಕೆಂದು ಆಗ್ರಹಿಸಿದರು. ನೀವು ಪ್ರಶ್ನೆ ಮಾಡಿದಂತೆ ನಾನು ಮಾಡಲಾಗಲ್ಲ. ಬೇಕಾದರೆ ಸದಸ್ಯರು ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಡಬಹುದು ಎಂದು ಸಿಇಒ ಜಾರಿಕೊಂಡರು.
ಅನುದಾನ ಹಂಚಿಕೆ: ಬಿಆರ್ಜಿಎಫ್ ಕ್ರಿಯಾಯೋಜನೆಯಲ್ಲಿ ಸ್ಥಳೀಯ ನಗರ ಸಂಸ್ಥೆಗಳಿಗೆ 631.80 ಲಕ್ಷ ನೀಡಲಾಗಿದ್ದು, ಅದರಲ್ಲಿ ಗುಲ್ಬರ್ಗ ಮಹಾನಗರ ಪಾಲಿಕೆಗೆ 147.24 ಲಕ್ಷ, ಶಹಾಬಾದ್ ನಗರಸಭೆಗೆ 82.99 ಲಕ್ಷ, ಚಿತ್ತಾಪುರ, ಆಳಂದ, ಸೇಡಂ, ವಾಡಿ ಪುರಸಭೆ, ಪಪಂಗಳಿಗೆ ತಲಾ 61.57 ಲಕ್ಷ, ಅಫಜಲ್ಪುರ ಮತ್ತು ಜೇವರ್ಗಿ ಪಪಂಗಳಿಗೆ 53.54 ಲಕ್ಷ, ಚಿಂಚೋಳಿ ಪಪಂಗೆ 48 ಲಕ್ಷ ಹಂಚಿಕೆ ಮಾಡಲಾಗಿದೆ.
  ಅಫಜಲ್ಪುರ ತಾಪಂಗೆ 50.54 ಲಕ್ಷ, ಆಳಂದಕ್ಕೆ 89.60 ಲಕ್ಷ, ಚಿಂಚೋಳಿಗೆ 73.71 ಲಕ್ಷ, ಚಿತ್ತಾಪುರಕ್ಕೆ 80 ಲಕ್ಷ, ಗುಲ್ಬರ್ಗ 82.70 ಲಕ್ಷ, ಜೇವರ್ಗಿ 75.81 ಲಕ್ಷ, ಸೇಡಂಗೆ 52.84 ಲಕ್ಷ ನೀಡಲಾಗಿದೆ. ಗ್ರಾಪಂ.ಗಳಿಗೆ ಅತಿ ಹೆಚ್ಚು ಅನುದಾನವನ್ನು ನೀಡಲಾಗಿದೆ.
ತಿಂಗಳ ಗಡುವು: ಅನುದಾನ ಖೋತಾ ಆಗದಂತೆ ತಡೆಯಲು ಕೂಡಲೇ ಸಭೆಯಲ್ಲಿ ಕ್ರಿಯಾಯೋಜನೆಯನ್ನು ತಾತ್ಕಾಲಿಕವಾಗಿ ರೂಪಿಸಿ ಅನುಮೋದನೆ ನೀಡಿ ಸರ್ಕಾರಕ್ಕೆ ರವಾನಿಸಲು ನಿರ್ಧರಿಸಲಾಯಿತು. ಅದಕ್ಕೆ ಪೂರಕವಾಗಿ ತಾಪಂಗಳಿಗೆ ಕೈಗೊಳ್ಳುವ ಕಾರ್ಯಕ್ರಮಗಳ ವಿವರಗಳುಳ್ಳ ಕ್ರಿಯಾಯೋಜನೆಯನ್ನು ಈ ತಿಂಗಳಾಂತ್ಯಕ್ಕೆ ರೂಪಿಸಿ ಜಿಪಂಗೆ ಸಲ್ಲಿಸುವಂತೆ ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಿಇಒ ಸೂಚನೆ ನೀಡಿದರು. ಅಲ್ಲದೆ ಅನುದಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕೆಂದು ತಾಕೀತು ಮಾಡಿದರು.
  ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿಯೂ ಹಿಂದುಳಿದಿರುವುದರಿಂದ ಈ ಎರಡು ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿ ಕ್ರಿಯಾಯೋಜನೆ ರೂಪಿಸುವಂತೆ ಸರ್ಕಾರದ ಸುತ್ತೋಲೆ ತಿಳಿಸಿದೆ. ಹೀಗಾಗಿ ಅದನ್ನು ಪಾಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
  ಸಭೆಯಲ್ಲಿ ಉಪಾಧ್ಯಕ್ಷೆ ಪಾರ್ವತಿ ಚವ್ಹಾಣ, ಮುಖ್ಯ ಯೋಜನಾಧಿಕಾರಿ ವಿರುಪಾಕ್ಷಪ್ಪ, ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ ಸೇರಿದಂತೆ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement