ಜಲಾಶಯಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿ: ಶಾಸಕ
ಸುರಪುರ: ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರನ್ನು ಆಗ್ರಹಿಸಿದ್ದಾರೆ. ನಾರಾಯಣಪುರ ಜಲಾಶಯದಲ್ಲಿ ಸಂಗ್ರಹವಿರುವ ನೀರನ್ನು ರಾತೋರಾತ್ರಿ ಹರಿಸಲಾಗುತ್ತಿದೆ ಎಂಬ ದೂರು ರೈತರು ಮತ್ತು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಇದರಿಂದ ಜಲಾಶಯದಲ್ಲಿ ನೀರಿನ ಕೊರತೆ ಉಂಟಾಗಿ ಬೇಸಿಗೆ ಹಂಗಾಮಿಗೆ ನೀರಿನ ಅವಶ್ಯಕತೆ ಬೀಳುತ್ತದೆ.
ನದಿಗೆ ನೀರು ಹರಿಸದಂತೆ ಮತ್ತು ಇದಕ್ಕೆ ಕಡಿವಾಣ ಹಾಕಲು ಡ್ಯಾಂಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಜಲಾಶಯಕ್ಕೆ ನಿತ್ಯವು ಹರಿದು ಬರುವ ನೀರಿನ ಒಳ, ಹೊರ ಹರಿವು ಎಷ್ಟು, ಜಲಾಶಯದಲ್ಲಿ ಸಂಗ್ರಹವಿರಬೇಕಾದ ನೀರಿನ ಗರಿಷ್ಠ ಮತ್ತು ಕನಿಷ್ಠ ಪ್ರಮಾಣ, ನದಿಗೆ ಹರಿಸಬೇಕಾದ ನೀರಿನ ಪ್ರಮಾಣ ಎಷ್ಟು, ಇವುಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಲು ದಿನಪತ್ರಿಕೆ, ದೃಶ್ಯ ಮಾಧ್ಯಮಗಳಿಗೆ ನಿತ್ಯ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಲು ಶಾಸಕ ಆರ್ವಿಎನ್ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದು ಕೋರಿದ್ದಾರೆ.