ತಂಪಾದ ಇಳೆ, ಹತ್ತಿ ಬಿತ್ತನೆ ಆರಂಭ
ಯಾದಗಿರಿ: ಕಳೆದ ಕೆಲವು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಶಹಾಪುರ ತಾಲೂಕಿನ ವಡಗೇರಾ ಹೋಬಳಿಯ ರೈತರು ಹೊಲದಲ್ಲಿ ಹತ್ತಿ ಬೀಜ ಬಿತ್ತನೆ ಆರಂಭಿಸಿದ್ದಾರೆ.
ಆರಿದ್ರಾ ಮಳೆ ಸಾಧಾರಣ ಮಟ್ಟಿಗೆ ಬಂದ ಕಾರಣ ಆ ಭಾಗದ ಗ್ರಾಮಗಳಾದ ಗೊಂದೆನೂರು, ಕೊಂಕಲ್, ಕಂಠಿತಾಂಡಾ, ಬೀರನಕಲ್, ಹಾಲಗೇರಾ, ಗಡ್ಡೆಸೂಗುರ, ಚೆನ್ನೂರ, ತುಮಕೂರ, ಕುರಿಹಾಳ, ಹಯ್ಯಾಳ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭರ್ಜರಿಯಾಗಿ ಮುಂಗಾರು ಬಿತ್ತನೆಯನ್ನು ರೈತರು ಆರಂಭಿಸಿದ್ದಾರೆ. ವಡಗೇರಾ ಹೋಬಳಿಯಲ್ಲಿ ಸುಮಾರು ನಾಲ್ಕೂ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿಯನ್ನು ರೈತರು ಬಿತ್ತುತ್ತಿದ್ದಾರೆ. ಖುಷ್ಕಿ ಭೂಮಿಯಲ್ಲಿ ಮತ್ತು ನಿರಾವರಿ ಭೂಮಿಯಲ್ಲಿ ಹತ್ತಿ ಬಿತ್ತನೆಯ ಕಾರ್ಯವನ್ನು ರೈತರು ಆರಂಭಿಸಿದ್ದಾರೆ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಸವರಾಜ ನಾಟೇಕಾರ ತಿಳಿಸಿದ್ದಾರೆ.
ಮಳೆ ವಿಳಂಬವಾದ್ದರಿಂದ ಹೆಸರು ಬಿತ್ತನೆಗೆ ತೊಡಕಾಗಿತ್ತು. ಈಗ ಸಾಧಾರಣ ಮಳೆಯಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದ್ದು, ಹತ್ತಿ ಬಿತ್ತನೆಗೆ ರೈತರು ಮುಂದಾಗಿದ್ದಾರೆ.