ಮಾಂಸದ ಮಳಿಗೆಗಳ ತೆರವು
ಜೇವರ್ಗಿ: ಪಟ್ಟಣದ ಬುಟ್ನಾಳ ರಸ್ತೆಯಲ್ಲಿರುವ ಹಾಗೂ ಸಂತೆ ಆವರಣದಲ್ಲಿರುವ ಮಾಂಸದ ಮಳಿಗೆಗಳನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸ್ಥಳೀಯ ಪಟ್ಟಣ ಪಂಚಾಯತಿ ತೆರವುಗೊಳಿಸಿದೆ. ಜನನಿಬಿಡ ಪ್ರದೇಶದಲ್ಲಿ ಮಾಂಸದ ವ್ಯಾಪಾರವನ್ನು ಸ್ಥಳೀಯರು ಬೇಡವೆಂದು ದೂರು ಬಂದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎಂದು ಪಪಂ ಮೂಲಗಳು ತಿಳಿಸಿವೆ.
ಈಗಾಗಲೇ ಸಂತೆ ಆವರಣದಲ್ಲಿ ಮಾಂಸ ಮಾರಾಟಕ್ಕಾಗಿಯೆ ಪಪಂ ಇಲಾಖೆಯಿಂದ ಮಳಿಗೆಗಳು ನಿರ್ಮಿಸಿಕೊಡಲಾಗಿದ್ದರೂ, ರಸ್ತೆಯ ಬದಿಯಲ್ಲೆ ಮಾಂಸದ ವ್ಯಾಪಾರ ಮಾಡಲಾಗುತ್ತಿತ್ತು. ಇದನ್ನು ಸ್ಥಳೀಯ ಜನತೆ ವ್ಯಾಪಕವಾಗಿ ವಿರೋಧಿಸುತ್ತಿರುವುದರಿಂದ ರಸ್ತೆಯ ಬದಿಯ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಪಂ ಮೂಲಗಳು ತಿಳಿಸಿವೆ.
ಇಂದು ರಕ್ತದಾನ ಶಿಬಿರ
ಗುಲ್ಬರ್ಗ: ನಗರದ ಚಿರಾಯು ಆಸ್ಪತ್ರೆ ತನ್ನ ವಾರ್ಷಿಕ ದಿನೋತ್ಸವದ ಅಂಗವಾಗಿ ಜೂ.29ರಂದು ರಕ್ತದಾನ ಶಿಬಿರವನ್ನು ತನ್ನ ಕ್ಯಾಂಪಸ್ನಲ್ಲೇ ಆಯೋಜಿಸಿದೆ. ಇನ್ನು ಜೂ.30ರಂದು ಭಾನುವಾರ ಮಧ್ಯಾಹ್ನ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ, ಖ್ಯಾತ ವೈದ್ಯರಾದ ಡಾ. ವಿವೇಕ ಜವಳಿ, ಡಾಯ ರಾಮಣ್ಣ ಅವರನ್ನು ಆಹ್ವಾನಿಸಿ ಅವರೆಲ್ಲರ ಸಮ್ಮುಖದಲ್ಲಿ ತನ್ನ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಿದೆ.