ಮುಂಗಾರು ಚಟುವಟಿಕೆ ಚುರುಕು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜೂ.28
ಎರಡು ವಾರ ತಡವಾದರೂ ವರುಣದೇವ ಕೃಪೆ ತೋರಿಸಿದ್ದು, ಮಣ್ಣಿನ ಮಕ್ಕಳ ಮೊಗದಲ್ಲಿ ಹರುಷ ಕಳೆ ಮೂಡಿದೆ.
ಕಳೆದ ಸೋಮವಾರದಿಂದ ಮೂರು ದಿನಗಳ ಕಾಲ ಗುಲ್ಬರ್ಗ ನಗರ ಸೇರಿದಂತೆ ಜಿಲ್ಲಾದ್ಯಂತ ಸುರಿದ ಮಳೆ ಬಿತ್ತನೆ ಮಾಡಲು ಅನುಕೂಲವಾಗಿದೆ. ಹೀಗಾಗಿ ಮಂಕುಕೊಂಡಿದ್ದ ಮುಂಗಾರು ಕೃಷಿ ಚಟುವಟಿಕೆಗಳು ಚುರುಕಗೊಂಡಿವೆ.
ರೈತರಲ್ಲಿ ಖುಷಿ: ಮೃಗಶಿರ(ಮಿರಗಾ) ಮಳೆ ಹೂಡಿದಾಗಿನಿಂದಲೂ ಭಾರಿ ಬಿರುಸಿನ ಮಳೆ ಪರಿಪೂರ್ಣವಾಗಿ ಎಲ್ಲಿಯೂ ಬಂದಿರಲಿಲ್ಲ. ಮಳೆ ವಿಳಂಬವಾಗುತ್ತಿರುವುದರಿಂದ ರೈತರು ಕೊಂಚ ನಿರಾಶೆಗೊಂಡಿದ್ದರು. ಆದರೆ, ಕಳೆದ ಸೋಮವಾರದಿಂದ ಮೂರು ದಿನ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಳೆಯಾಗಿದೆ. ಇದರಿಂದಾಗಿ ಮಳೆ ಕೈಕೊಡುತ್ತದೆ ಎಂಬ ಕಾರ್ಮೋಡ ಕರಗಿ ಜೀವಹನಿಯಾಗಿ ರೈತರಲ್ಲಿ ಖುಷಿ ಮೂಡಿಸಿದೆ.
ರೈತರ ಮುಂಗಾರು ಹಬ್ಬ ಕಾರ ಹುಣ್ಣಿಮೆ ಮುಗಿದ ಬೆನ್ನಲ್ಲಿಯೇ ಮಳೆ ಬರಲಾರಂಬಿಸಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಬೀಜ- ರಸಗೊಬ್ಬರ ಖರೀದಿಗೆ ರೈತರು ಆರಂಭಿಸಿದ್ದು, ಮಾರಾಟದ ಅಂಗಡಿಗಳು, ರೈತ ಸಂಪರ್ಕ ಕೇಂದ್ರಗಳು ಈಗ ರೈತರಿಂದ ಗಿಜಿಗುಡುತ್ತಿವೆ. ಮುಂಗಾರು ಆರಂಭದಲ್ಲಿಯೇ ಬಿದ್ದ ಸ್ವಲ್ಪ ಮಳೆಗೆ ಭೂಮಿಯನ್ನು ಹದ ಮಾಡಿಕೊಂಡವರು ಜಿಲ್ಲೆಯ ಕೆಲವಡೆ ಬಿತ್ತನೆ ಮಾಡಲು ಶುರುವಿಟ್ಟಿದ್ದಾರೆ.
ಮೊಂಡು ಧೈರ್ಯದಿಂದ ಬಿತ್ತನೆ: ಚಿಂಚೋಳಿ ತಾಲೂಕಿನ ಕೆಲ ಪ್ರದೇಶದಲ್ಲಿ, ಗುಲ್ಬರ್ಗಕ್ಕೆ ಸಮೀಪದ ಕಮಲಪುರ ವಲಯದಲ್ಲಿ ಕೊಂಚ ಪ್ರದೇಶದಲ್ಲಿ ರೈತರು ಅರೆಬರೆ ಹಸಿಯಲ್ಲಿಯೇ ಮೊಂಡು ಧೈರ್ಯ ಮಾಡಿ ಬಿತ್ತನೆ ಮಾಡಿದ್ದರು. ಈಗ ಮಳೆ ಬಂದಿರುವುದರಿಂದ ಆರಂಭದಲ್ಲಿ ಬಿತ್ತನೆಯಾದ ಬೆಳೆಗಳಿಗೆ ಜೀವ ಕಳೆ ಬಂದಂತಾಗಿದೆ.
ಜಿಲ್ಲೆಯಲ್ಲಿ ಬಿತ್ತನೆ ಮಾಡಲು ಸರಾಸರಿ 60 ರಿಂದ 70 ಮಿ.ಮೀ ಮಳೆಯಾದರೆ ಸಾಕು, ಬಿತ್ತನೆ ಮಾಡಬಹುದು. ಉಳಿದಿದ್ದು ನಾಟಿಗೆ ನಂತರ ಬಂದರೂ ಬೆಳೆಗಳು ಜೀವ ಹಿಡಿದುಕೊಳ್ಳುತ್ತವೆ. ಈ ಸಲದ ಮುಂಗಾರು ಆರಂಭದಿಂದ ಜೂನ್ ಮೊದಲ ದಿನದಿಂದ ಹಿಡಿದು ಕಳೆದ ಸೋಮವಾರದವರೆಗೆ ಶೇ.70 ರಷ್ಟು ಸರಾಸರಿ ಮಳೆಯಾಗಿದೆ.
ಗುಲ್ಬರ್ಗದಲ್ಲಿ ಅತಿ ಹೆಚ್ಚು ಮಳೆ: ಅಫಜಲ್ಪುರ ತಾಲೂಕಿನಲ್ಲಿ ಶೇ. 73.80 ಮಿಮೀ, ಆಳಂದ ತಾಲೂಕಿನಲ್ಲಿ 79 ಮಿಮೀ, ಚಿತ್ತಾಪುರದಲ್ಲಿ 69 ಮಿಮೀ, ಗುಲ್ಬರ್ಗದಲ್ಲಿ 93 ಮಿಮೀ, ಜೇವರ್ಗಿಯಲ್ಲಿ 88 ಮಿಮೀ ಹಾಗೂ ಸೇಡಂನಲ್ಲಿ 92 ಮಿಮೀ ಮಳೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ದಿನ ಗುಲ್ಬರ್ಗದಲ್ಲಿ 19.6 ಮಿಮೀ ಅತಿ ಹೆಚ್ಚು ಮಳೆಯಾಗಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಗುಲ್ಬರ್ಗ ಜಿಲ್ಲೆಯಲ್ಲಿ 5,71, 200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ. ಅದರಲ್ಲಿ ಈಗಾಗಲೇ 28 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದ್ದು, ಇನ್ನೂಳಿದ ಪ್ರದೇಶದಲ್ಲಿ ಶೇ. 90ರಷ್ಟರಲ್ಲಿ ಇನ್ನೊಂದು ವಾರ ಇಲ್ಲವೆ ಹತ್ತು ದಿನಗಳಲ್ಲಿ ಬಿತ್ತನೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಬೀಜ, ಗೊಬ್ಬರ ಕೊರತೆಯಾಗಲ್ಲ: ಗುಲ್ಬರ್ಗ ಜಿಲ್ಲೆಗೆ ಈ ಸಲ 22 ಸಾವಿರ ಕ್ವಿಂಟಲ್ ಬೀಜದ ಬೇಡಿಕೆಯಿದ್ದು, ಅದರಲ್ಲಿ 5800 ಕ್ವಿಂಟಲ್ ತೊಗರಿ ಬೀಜ ಬೇಕಾಗುತ್ತದೆ. 1,30,870 ಮೆಟ್ರಿಕ್ ಟನ್ ರಸಗೊಬ್ಬರ ಬೇಕಿದ್ದು, ಅದರಲ್ಲಿ ಈಗಾಗಲೇ 75 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಬಂದಿದ್ದು, ಎಲ್ಲ ವಿಎಸ್ಎಸ್ಎನ್ಗಳಿಗೆ ರವಾನಿಸಲಾಗಿದೆ. ಅಲ್ಲದೆ ಖಾಸಗಿಯಾಗಿರುವ ಆಗ್ರೋಗಳಿಗೂ ವಿತರಿಸಲಾಗಿದೆ. ಹೀಗಾಗಿ ಈ ಸಲ ಬಿತ್ತನೆ ಬೀಜ ಮತ್ತು ಗೊಬ್ಬರ ಕೊರತೆಯಾಗಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ಕೊಂಚ ವಿಳಂಬವಾಗಿದ್ದರಿಂದ ಸಮಯ ಸಿಕ್ಕದ್ದರಿಂದ ಅಗತ್ಯವಿರುವುದರ ದಾಸ್ತಾನು ಮಾಡಲಾಗಿದೆ. ಹೀಗಾಗಿ ರೈತರು ಕೇಳುವ ಬೀಜ- ಗೊಬ್ಬರ ಕೊಡಲು ಅನುಕೂಲವಾಗಿದೆಯಂತೆ. ಬಹುತೇಕ ರೈತರು ತೊಗರಿ, ಹತ್ತಿ ಮತ್ತು ಸೂರ್ಯಕಾಂತಿ ಬಿತ್ತನೆಗೆ ಒಲವು ತೋರಿಸುತ್ತಿದ್ದಾರೆ. ಮಳೆ ವಿಳಂಬವಾಗಿದ್ದರಿಂದ ಹೆಸರಿನ ಬಿತ್ತನೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.