ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರ ಕೊರತೆ ಅಡ್ಡಿ
ಕನ್ನಡಪ್ರಭ ವಾರ್ತೆ ಶಹಾಪುರ ಜೂ.29
ಆದರ್ಶ ವಿದ್ಯಾಲಯದ ಹೆಸರಿನಲ್ಲಿ ಅರ್ಹತಾ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ವಿಶೇಷವಾಗಿ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ಮಕ್ಕಳ ಭವಿಷ್ಯ ರೂಪಿಸುವ ಹೊಣೆಗಾರಿಕೆ ಹೊತ್ತ ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯ ಎಲ್ಲಾ ಸೌಲಭ್ಯಗಳಿಂದಲೂ ವಂಚಿತವಾಗಿದೆ. ಆದರ್ಶವೆಂಬ ಹೆಸರಿಗೆ ವ್ಯತಿರಿಕ್ತವಾಗಿ ಕಂಡುಬರುತ್ತಿದೆ.
ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣವೇ ಇಲ್ಲ. ಉತ್ತಮವಾದ ಕುಡಿಯುವ ನೀರಿಲ್ಲ, ಹೆಣ್ಣುಮಕ್ಕಳಿಗೆ ಶೌಚಾಲಯದ ಕೊರತೆ, ಬಿಸಿಯೂಟ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತದೆ. ಮಳೆ ಬಂದರೆ ಶಾಲೆಯೆಂಬುದು ಕೆರೆಯಂಗಳದಂತಾಗಿರುತ್ತದೆ. ವಿದ್ಯಾರ್ಥಿಗಳು ಕೂಡುವ ಕೋಣೆಗಳಿಗೆ ಹೊಂದಿಕೊಂಡಂತೆ ಪುರಸಭೆ ಶೌಚಾಲಯಗಳಿದ್ದು, ದುರ್ವಾಸನೆ ಬರುತ್ತದೆ. ಶಿಥಿಲಗೊಂಡ ಕಿಟಕಿ ಬಾಗಿಲುಗಳು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಗತಿ ಕೊಠಡಿ ಇಲ್ಲದಿರುವುದು ಹೀಗೆ ಹಲವಾರು ಸಮಸ್ಯೆಗಳನ್ನೇ ಆದರ್ಶ ಶಾಲೆ ಹೊದ್ದು, ಮಲಗಿದೆ. ಇಷ್ಟೆಲ್ಲ ಕೊರತೆ ಇದ್ದರೂ ಇದುವರೆಗೆ ಶಿಕ್ಷಕರ ಕೊರತೆ ಇರಲಿಲ್ಲ. ಆದರೆ ಈ ಬಾರಿ ಬೇರೆ ಶಾಲೆಯಿಂದ ನಿಯೋಜಿತಗೊಂಡವರು ಮತ್ತೆ ತಮ್ಮ ಸ್ಥಾನಕ್ಕೆ ಹೋಗಿರುವುದರಿಂದ ಶಿಕ್ಷಕರ ಕೊರತೆಯೂ ಎದುರಾಗಿದೆ.
ಇಂಗ್ಲಿಷ್ ಮಾಧ್ಯಮದ ಹೆಸರಲ್ಲಿ ನಡೆಯುತ್ತಿರುವ ಶಾಲೆಗೆ ಇಂಗ್ಲಿಷ್ ಶಿಕ್ಷಕರೇ ಇಲ್ಲದಿರುವುದು ಶಾಲೆ ಆರಂಭಿಸಿದ ಉದ್ದೇಶಕ್ಕೇ ವ್ಯತಿರಿಕ್ತವಾಗಿದೆ. ಇದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣದ ಹೆಸರಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಕಾರದಿಂದ ನಡೆಯುತ್ತಿರುವ ಶಾಲೆಗಳು ಕಾಟಾಚಾರಕ್ಕೆ ಎಂಬಂತಾಗಿದೆ.
ವ್ಯತ್ಯಾಸ ಕಾಣದ ಆದರ್ಶ ಶಾಲೆ: ಆದರ್ಶ ಶಾಲೆಗಳ ಪ್ರವೇಶ ಪಡೆದವರಲ್ಲಿ ಪ್ರತಿಭಾನ್ವಿತರೇ ಇದ್ದು ಅವರಿಗೆ ಇನ್ನಷ್ಟು ಉತ್ತಮ ಶಿಕ್ಷಣ ನೀಡುವಲ್ಲಿ ಇದು ಸಂಪೂರ್ಣ ವಿಫಲವಾಗಿದೆ. ಸಾಮಾನ್ಯ ಸರ್ಕಾರಿ ಶಾಲೆಯಲ್ಲಿರುವ ಸೌಲಭ್ಯವೂ ಇಲ್ಲಿ ಇಲ್ಲದಂತಾಗಿದೆ. ಜೂನ್ ತಿಂಗಳು ಮುಗಿಯುತ್ತ ಬಂದರೂ ಶಿಕ್ಷಕರ ಕೊರತೆ ಎದ್ದುಕಾಣುತ್ತಿದೆ. ಶಾಶ್ವತ ಕಟ್ಟಡಕ್ಕಾಗಿ ಅನುದಾನದ ಅವಕಾಶವಿದ್ದರೂ ಸರಿಯಾದ ನಿವೇಶನ ಸಿಗದೇ ಕಾಮಗಾರಿ ಆಗುತ್ತಿಲ್ಲ. ಪ್ರಯೋಗಾಲಯ, ಕಂಪ್ಯೂಟರ್ ಶಿಕ್ಷಣ, ದೈಹಿಕ ಶಿಕ್ಷಣ ಹೀಗೆ ಎಲ್ಲದರಿಂದಲೂ ಆದರ್ಶ ಶಾಲೆ ಮಕ್ಕಳು ವಂಚಿತರಾಗಿದ್ದಾರೆ. ಈ ಕುರಿತು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ಮಾಡಬೇಕಿದೆ. ಅಧಿಕಾರಿಗಳು ಎಚ್ಚೆತ್ತು ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಸಮೂಹದ ಭವಿಷ್ಯಕ್ಕಾಗಿ ಕಾಳಜಿ ವಹಿಸಲು ಪಾಲಕರ ಆಗ್ರಹವಾಗಿದೆ.