'ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಅನುದಾನ ನೀಡಲಿ'
ಯಾದಗಿರಿ: ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ರು. 4 ಸಾವಿರ ಕೋಟಿ ಅನುದಾನ ನೀಡಬೇಕು. ಇದರಿಂದಾಗಿ ಹಿಂದುಳಿದ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಗಳು ಅಭಿವೃದ್ಧಿಯಾಗಲಿದೆ ಎಂದು ಸಮಿತಿಯ ಮಾಜಿ ಅಧ್ಯಕ್ಷ ತ್ರಿವಿಕ್ರಮ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮಿತಿಯ ಅವಧಿ ಇನ್ನೂ ಎರಡು ವರ್ಷವಿದ್ದು, ಅವಧಿ ಮುಗಿದ ಕೂಡಲೇ ರಾಜ್ಯ ಸರ್ಕಾರ ಮತ್ತೆ ನಾಲ್ಕು ವರ್ಷ ವಿಸ್ತರಣೆ ಮಾಡಬೇಕು. ಸಮಿತಿ ವ್ಯಾಪ್ತಿಯಲ್ಲಿ ಬರುವ ಒಟ್ಟು 114 ಹಿಂದುಳಿದ ತಾಲೂಕುಗಳು ಅಭಿವೃದ್ಧಿಯಾಗಲು ಅವಧಿ ವಿಸ್ತರಣೆ ಮಾಡುವುದು ಅಗತ್ಯವಿದೆ ಎಂದರು.
ಅನುದಾನ ಮೀಸಲು: ಎಸ್ಡಿಪಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಮೌಲ್ಯಮಾಪನ ಕೂಡ ನಡೆಯುತ್ತಿದೆ. ನಾನು ಅಧ್ಯಕ್ಷನಾಗಿದ್ದಾಗ ಮೌಲ್ಯಮಾಪನ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಬಿಜೆಪಿ ಸರ್ಕಾರದಲ್ಲಿ ಒಟ್ಟು ವಾರ್ಷಿಕ ಬಜೆಟ್ ರು. 2,925 ಕೋಟಿ ಅನುದಾನ ತೆಗೆದಿಡಲಾಗಿದೆ. ಈ ಪೈಕಿ ಶೇ.40ರಷ್ಟು ಹೈಕ ಭಾಗಕ್ಕೆ ಬರಲಿದೆ. ಈ ಭಾಗದ ಒಟ್ಟು 6 ಜಿಲ್ಲೆಗಳ 29 ತಾಲೂಕುಗಳು ಇದಕ್ಕೆ ಒಳಪಟ್ಟಿವೆ. ಪ್ರತಿ ತಾಲೂಕಿಗೆ ಸುಮಾರು ರು. 40 ಕೋಟಿ ಅನುದಾನ ಬರಲಿದೆ ಎಂದು ವಿವರಿಸಿದರು.
ಆಯಾ ತಾಲೂಕಿನ ವಿಧಾನಸಭೆ ಕ್ಷೇತ್ರದ ಸದಸ್ಯರು ಕೂಡ ಎಸ್ಡಿಪಿ ಯೋಜನೆ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಲು ಮುತುವರ್ಜಿ ವಹಿಸಬೇಕಿದೆ. ಎಸ್ಡಿಪಿ ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಆಯಾ ಜಿಲ್ಲೆಗಳು ಕ್ರಿಯಾ ಯೋಜನೆಯನ್ನು ಬೇಗ ತಯಾರಿಸಿ ವರದಿ ಸಲ್ಲಿಸಬೇಕಿದೆ. ಆಗಸ್ಟ್ ತಿಂಗಳೊಳಗೆ ಮಂಜೂರಾತಿ ಪಡೆದುಕೊಂಡರೆ ಬಜೆಟ್ ಮಂಡನೆ ಆಗುವ ಮುಂಚೆ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬಹುದು. ಒಂದು ವೇಳೆ ತಡವಾಗಿ ಕ್ರಿಯಾ ಯೋಜನೆ ರೂಪಿಸಿದರೆ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸಲು ಸಾಧ್ಯವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಮಲ್ಲಾಬಾದಿ, ದೇವೀಂದ್ರನಾಥ ನಾದ್, ಮಹೇಂದ್ರ ಕಲಾಲ ಹಾಗೂ ನೀಲಕಂಠರಾಯ ಯಲ್ಹೇರಿ ಇದ್ದರು.