'ಮಹಾಲನೋಬಿಸ್ ಕೊಡುಗೆ ಅಪಾರ'
ಯಾದಗಿರಿ; ಸಂಖ್ಯಾಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡುವುದರ ಜತೆಗೆ ಭಾರತದ ಎರಡನೇ ಪಂಚವಾರ್ಷಿಕ ಯೋಜನೆ ರೂಪಿಸುವಲ್ಲಿ ಪ್ರೊ.ಪಿ.ಸಿ. ಮಹಾಲನೋಬಿಸ್ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಸವರಾಜ ಹೇಳಿದರು.
ಜಿಪಂ ಸಭಾಂಗಣದಲ್ಲಿ ಶನಿವಾರ ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ. ಮಹಾಲನೋಬಿಸ್ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು. ಪಿ.ಸಿ. ಮಹಾಲನೋಬಿಸ್ ಅವರು ಸಂಖ್ಯಾಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವುದರ ಜತೆಗೆ ದೇಶದಲ್ಲಿ ಸಾಂಖ್ಯಿಕ ಕ್ಷೇತ್ರಕ್ಕೆ ವಿಶೇಷ ರೂಪರೇಷೆಯನ್ನು ನೀಡಿದ್ದಾರೆ. ಅವರ ಕೊಡುಗೆ ಸ್ಮರಣಾರ್ಥವಾಗಿ ನಾವೆಲ್ಲ ಕಾರ್ಮಿಕ ಮತ್ತು ಉದ್ಯೋಗ ಅಂಕಿ ಅಂಶಗಳ ಸಂಗ್ರಹಣೆ ಮತ್ತು ಇತರೆ ಮಹತ್ವವಾದ ಅಂಕಿ ಅಂಶಗಳ ಸಂಗ್ರಹಣೆ ಮೂಲಕ ನಮ್ಮ ಸೇವೆಯನ್ನು ಅವರಿಗೆ ಸಮರ್ಪಣೆ ಮಾಡಿದಾಗ ಮಾತ್ರ ಅವರ ಜನ್ಮ ದಿನಾಚರಣೆ ಆಚರಿಸುವುದಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಅಂಕಿ ಅಂಶ: ಉಪನ್ಯಾಸ ನೀಡಿದ ಲಿಂಗೇರಿ ಕೋನಪ್ಪ ಮಹಿಳಾ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಜಿ.ಎಂ. ವಿಶ್ವಕರ್ಮ, ಜಿಲ್ಲೆಯ ಕಾರ್ಮಿಕರ ಸಂಖ್ಯೆ ಮತ್ತು ಉದ್ಯೋಗ ಅಂಕಿ ಅಂಶಗಳು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುವ ಅಂಕಿ ಅಂಶ ಸಂಗ್ರಹಿಸಿ ಸರ್ಕಾರಕ್ಕೆ ವರದಿ ನೀಡಬೇಕು. ಸರ್ಕಾರದ ವಿವಿಧ ಯೋಜನೆಗಳಿಗೆ ಅಂಕಿ ಸಂಖ್ಯೆಗಳೇ ಬೆನ್ನಲುಬಾಗಿ ನಿಲ್ಲುತ್ತವೆ. ಸಾಮಾಜಿಕ, ಆರ್ಥಿಕ ಕ್ಷೇತ್ರ, ದೇಶದ ಉತ್ಪಾದನೆ, ಆದಾಯ ಮತ್ತು ಪ್ರಗತಿ ದರ ಹೆಚ್ಚಳಕ್ಕೆ ನಿಖರ ಅಂಕಿ ಅಂಶಗಳು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಮತ್ತು ಉದ್ಯೋಗ ಅವಕಾಶಗಳ ಬಗ್ಗೆಯೂ ನಿಖರ ಮಾಹಿತಿ ನೀಡಿದಲ್ಲಿ ಮಾನವ ಸಂಪನ್ಮೂಲ ಸಮರ್ಪಕವಾಗಿ ಬಳಸಲು ಸಾಧ್ಯವಿದೆ ಎಂದು ಹೇಳಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶೇಖ್ ಮೆಹಬೂಬ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂಖ್ಯಿಕ ಅಧಿಕಾರಿ ಪ್ರಶಾಂತ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.