ಹಾಡಹಗಲೇ ಪಾದಚಾರಿ ದಾರಿ ಕಳವು!
ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ ಗುಲ್ಬರ್ಗ ಜೂ.29
ನೋಟ-1
ಪಾದಚಾರಿ ರಸ್ತೆಯ ಮೇಲೆಯೇ ಆಲ್ಮೆರಾ, ಗಾದೆ, ಕುರ್ಚಿಗಳು, ತೊಟ್ಟಿಲುಗಳನ್ನಿಟ್ಟು ಭರ್ಜರಿ ಮಾರಾಟ ನಡೆದರೂ ಯಾರೂ ಅತ್ತ ನೋಡುವವರಿಲ್ಲ, ಸಂಚಾರಿ ಪೊಲೀಸರು ನಿತ್ಯವೂ ಇಲ್ಲೇ ಸುತ್ತಿದರೂ ಹೀಗ್ಯಾಕೆ ಎಂದು ಪ್ರಶ್ನಿಸೋದಿಲ್ಲ. 5 ಅಡಿ ಅಗಲ ದಾರಿ ಇದ್ಗರೂ ಪಾದಚಾರಿಗಳು ಅದನ್ನು ವರ್ತಕರಿಗೆ ಬಿಟ್ಟು ಕೊಡುವ ಅನಿವಾರ್ಯತೆ.
ನೋಟ-2
ಮಳಿಗೆ- ಮುಂಗಟ್ಟು ವರ್ತಕರು ಬಳಸುವ ಬೈಕ್ಗಳಿಗೂ ಪಾದಚಾರಿ ರಸ್ತೆಗಳೇ ಪಾರ್ಕಿಂಗ್ ಪ್ಲೇಸ್ ಸಾರ್ವಜನಿಕ ರು ಓಡಾಡುವ ಈ ದಾರಿಯಲ್ಲೇಕೆ ಪಾರ್ಕಿಂಗ್ ಮಾಡ್ತೀರಿ ಅಂತ ಪೊಲೀಸರು ಕೇಳೋದಿಲ್ಲ. ಪಾದಚಾರಿಗಳೋ ಬೈಕ್ಗಲ ಮಧ್ಯೆ ಇರುವ ಸಂದು- ಗೊಂದನ್ನೇ ಬಳಸಿ ಸಂಚರಿಸಬೇಕಷ್ಟೆ.
ನೋಟ- 3
ಇನ್ನೂ ಕೆಲವು ಪಾದಚಾರಿ ರಸ್ತೆಗಳಲ್ಲಂತೂ ಹಣ್ಣಿನ ಮಳಿಗೆ, ಬಟ್ಟೆ ಗಾಡಿಗಳದ್ದೇ ಕಾರುಬಾರು. ಜೊತೆಗೇ ಆಟೋಗಳು ಪಾದಚಾರಿಗಳು ಫುಟ್ಪಾತ್ ಬಳಸದಂತೆ ಅಟಕಾಯಿಸಿಕೊಂಡು ನಿಂತರೂ ಕ್ಯಾರೆ ಎನ್ನುವವರಿಲ್ಲ. ಹತ್ತಾರು ಸಂಚಾರಿ ಪೊಲೀಸರು ಇಲ್ಲೆಲ್ಲಾ ಕರ್ತವ್ಯ ನಿರ್ವಹಿಸುತ್ತ ಶಿಳ್ಳೆ ಹಾಕುತ್ತಾರಾದರೂ ಪಾದಚಾರಿ ರಸ್ತೆ ನಡೆದುಕೊಂಡು ಓಡಾಡುವವರಿಗೆ ಮೀಸಲಿರುವಂತೆ ನೋಡಿಕೊಳ್ಳಲಾಗುತ್ತಿಲ್ಲ.
ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ನಿರಂತರ ಜನ ಹಾಗೂ ವಾಹನ ದಟ್ಟಣೆಯಿರುವ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿರುವ ಪಾದಚಾರಿ ದಾರಿ (ಫುಟ್ಪಾತ್) ದುರ್ಬಳಕೆಯ ಝಲಕ್ಗಳಿವು.
ಯಾರೂ ಕೇಳೋರಿಲ್ಲ: ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಸಾರ್ವಜನಿಕರ ಸಂಚಾರಕ್ಕೆಂದು ಮೀಸಲಿರಬೇಕಾಗಿದ್ದ ಪಾದಚಾರಿ ದಾರಿಗಳು ಇಂದು ಮಳಿಗೆ- ಮುಂಗಟ್ಟು ವರ್ತಕರಿಂದ, ಹಣ್ಣಿನ ಬಂಡಿಗಳ ವರ್ತಕರಿಂದ, ಬಟ್ಟೆ ವ್ಯಾಪಾರಿಗಳಿಂದ ಅತಿಕ್ರಮಣಕ್ಕೊಳಗಾಗುತ್ತಿದ್ದರೂ ಯಾರೂ ಕೇಳೋರಿಲ್ಲ.
ಪ್ರಶ್ನಿಸುವವರೇ ಇಲ್ಲ: ಪಾದಚಾರಿಗಳ ಬಳಕೆಗೆ ಮೀಸಲಿರುವ ದಾರಿ ಯಾಕೆ ಹೀಗೆ ಕುಗ್ಗುತ್ತ ಸಾಗಿದೆ ಎಂಬುದನ್ನು ಪ್ರಶ್ನಿಸುವವರೇ ಇಲ್ಲ. ಮಾರ್ಕೆಟ್ ಸುತ್ತಮುತ್ತಲೇ ಸಂಚಾರಿ ಠಾಣೆ, ಚೊಕ್, ಬ್ರಹ್ಮಪೂರ ಠಾಣೆಗಲಿವೆ. ಇಲ್ಲೆಲ್ಲಾ ನಿತ್ಯವೂ ಹತ್ತಾರು ಪೊಲೀಸರು ಶಿಳ್ಳೆ ಊದುತ್ತ ಗಸ್ತಲ್ಲಿರುತ್ತಾರೆ. ಹೀಗಿದ್ದರೂ ರಾಜಾರೋಷವಾಗಿ ಪಾದಚಾರಿ ದಾರಿ ಕಬಳಿಕೆ ಸಾಗಿದೆ. ಸಾರ್ವಜನಿಕರು ಈ ದಾರಿಗುಂಟ ಹೆಜ್ಜೆ ಇಡಲಿಕ್ಕೂ ಆಗದಂತಹ ಪರಿಸ್ಥಿತಿ ಇಲ್ಲಿ ತಲೆ ಎತ್ತಿದೆ.
ಹೆಚ್ಚಿದ ವಾಹನ ದಟ್ಟಣೆ: ಈಚೆಗಿನ ದಿನಗಳಲ್ಲಂತೂ ಸೂಪರ್ ಮಾರ್ಕೆಟ್ ಪ್ರದೇಶ ವಾಹನ ದಟ್ಟಣೆಯಿಂದ ಗಿಜಿಗುಡುವಂತಾಗಿದೆ. ನೃಪತುಂಗ ಸಾರಿಗೆ ಈ ಮಾರುಕಟ್ಟೆ ಪ್ರವೇಶಿಸಿ ಸಾಮಾನ್ಯ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಆದರೆ ಪಾದಚಾರಿ ರಸ್ತೆಗಳು ಅತಿಕ್ರಮಣಗೊಂಡಿದ್ದರಿಂದಾಗಿ ನಡೆದಾಡಿಕೊಂಡು ಹೋಗುವವರಿಗೆ ಸುರಕ್ಷತೆಯೇ ಮರೀಚಿಕೆಯಾಗಿದೆ.
ಅಡ್ಡಾದಿಡ್ಡಿ ವಾಹನ ಸಂಚಾರ: ಮಕ್ಕಳು, ಮರಿಗೋಳ ಜೊತೆ ಮಾರ್ಕೆಟ್ಗೆ ಬಂದರೆ ಪಾದಚಾರಿ ರಸ್ತಾ ಬಳಕೆಗೇ ಸಿಗೋದಿಲ್ಲ. ಅಲ್ಲೆಲ್ಲಾ ಅಡ್ಡಾದಿಡ್ಡಿ ಸಾಮಾನು ಅಂಗಡಿಯವರು ಇಟ್ಟಿರ್ತಾರ, ಅಂತಹ ಸಾಮಾನ ಹರವಿದ್ದ ಜಾಗಾದಾಗ ಕಾಲಿಡಲಿಕ್ಕೂ ಆಗೋದಲ್ರಿ, ರಸ್ತೆಗೆ ಇಳಿಯೋಣ ಅಂದ್ರ ಅಡ್ಡಾದಿಡ್ಡಿ ವಾಹನ ಸಂಚಾರ. ಹೀಂಗಾಗಿ ನಾವು ಬಕ್ಳ ತ್ರಾಸದಾಗ ಬಿದ್ದೀವಿ ಎಂಬುದು ಮಾರುಕಟ್ಟೆಯಲ್ಲಿನ ಅವ್ಯವಸ್ಥೆಗಳಿಗೆ ನಿತ್ಯವೂ ಸಾಕ್ಷಿಯಾಗುವ ಜನರ ಗೋಳು.
ಮಹಿಳೆಯರಿಗೆ ತಪ್ಪದ ಕಿರಿಕಿರಿ: ಮಹಿಳೆಯರಂತೂ ಪಾದಚಾರಿ ದಾರಿ ಅತಿಕ್ರಮಣ, ಬೇಕಾಬಿಟ್ಟಿ ಆಟೋ ನಿಲ್ಲಿಸುವದರಿಂದ ಕಂಗೆಟ್ಟು ಹೋಗಿದ್ದಾರೆ. ದಾರಿಗುಂಟ ಹೋಗ್ಲಿಕ್ಕೂ ಆಗದ್ಹಂಗ ಅಗೈತಿ. ಬೇಕಾಬಿಟ್ಟಿ ಉಗಳ್ತಾರ, ಎಲ್ಲಿ ಬೇಕೆಂದರಲ್ಲಿ ನಿಲ್ತಾರ, ಆಟೋ ನಿಲ್ಲಿಸಿ ಬಿಟ್ರ ಹೋಗೋದು ಹ್ಯಾಂಗ್ರಿ...ಕನಿಷ್ಠ ಸಾಮಾನ್ಯ ನಾಗರಿಕ ಜ್ಞಾನವೂ ಇಲ್ಲಿ ಮಾಯವಾಗಿದೆ, ಪೊಲೀಸರು ಇಂತಹ ತೊಂದರೆಗಳನ್ನ ನಿಭಾಯಿಸೋ ಗೋಜಿಗೂ ಹೋಗಿದಿಲ್ಲ... ಎಂದು ಮಹಿಳೆಯರು ಮಾರುಕಟ್ಟೆಯಲ್ಲಿ ಕಾಲಿಟ್ಟರೆ ತೀರಿತು, ಗೊಣಗಿಕೊಂಡೇ ಮನೆ ಸೇರುತ್ತಾರೆ.
ಸುರಕ್ಷತೆ ಎಂಬುದೇ ಮಾಯ: ಪಾದಚಾರಿ ರಸ್ತೆ ಜನರೆಲ್ಲರಿಗೂ ಸುರಕ್ಷಿತ. ಆದರಿಲ್ಲಿ ಅದೇ ಕಳೆದು ಹೋಗಿದೆ. ವರ್ತಕರ ಅಟಾಟೋಪ, ಆಟೋಗಳವರ ರಾಜಾರೋಶ ವರ್ತನೆಯಿಂದ ಈ ರಸ್ತೆ ಎಲ್ಲಿ ಎಂದು ಹುಡುಕುವಂತಾಗಿದೆ. ಹಲವೆಡೆಯಂತೂ ಇದು ಪಾದಚಾರಿ ರಸ್ತೆಯೋ ಅಲ್ಲವೋ, ಮಳಿಗೆಯವರದ್ದೇ ಜಾಗವೋ ಎಂಬಂತಹ ನೋಟಗಳಿವೆ.
ಜಿಲ್ಲಾಧಿಕಾರಿಗಳಂತೂ ಸೂಪರ್ ಮಾರ್ಕೆಟ್ ಸಮಿತಿ ಅಧ್ಯಕ್ಷರೂ ಹೌದು. ಇನ್ನಾದರೂ ರಸ್ತೆ ಸುರಕ್ಷತಾ ಸಮಿತಿ ಸೂಪರ್ ಮಾರ್ಕೆಟ್ನಲ್ಲಿ ಹಾಡ ಹಗಲೇ ಕಳೆದು ಹೋಗಿರುವ ಪಾದಚಾರಿ ರಸ್ತೆಯನ್ನು ಬಡಪಾಯಿ ಪಾದಚಾರಿಗಳ ಬಳಕೆಗೆ ಸದಾಕಾಲ ಲಭ್ಯವಿರುವಂತೆ ಮಾಡುವರೆ ಕಾಲವೇ ಉತ್ತರಿಸಬೇಕಷ್ಟೆ. ಪಾದಚಾರಿ ದಾರಿ ಉಳಿಸಿಕೊಡುವ ಕಾಳಜಿ ಪೊಲೀಸ್, ಜಿಲ್ಲಾಡಳಿತ ಪ್ರದರ್ಶಿಸುವುದೇ ಎಂಬುದೇ ಜನರನ್ನು ಕಾಡುತ್ತಿರುವ ಪ್ರಶ್ನೆ.
ಎಲ್ಲರೂ ಕೋಟ್ಯಾಧೀಶರೇ
ಎಲ್ಲರೂ ಕೋಟ್ಯಾಧೀಶ ವರ್ತಕರೇ, ಅವರ ಬಿಸಿನೆಸ್ ಪಾಯಿಂಟ್ಗಳ ಮುಂದೆಯೇ ಇಂತಹ ರಸ್ತೆ ದುರ್ಬಳಕೆ ಎಗ್ಗಿಲ್ಲದೆ ಸಾಗಿದೆ. ಹೀಗಾಗಿ ದೊಡ್ಡವರೇ ಹೀಗಿದ್ದಾಗ ನಾವೇನು ಮಾಡೋಕಾಗುತ್ತದೆ ಎಂದು ಪೊಲೀಸರು ಅದೆಷ್ಟೋ ಬಾರಿ ಈ ವಿಚಾರವಾಗಿ ವಾದ ಮಾಡುವ, ಚರ್ಚೆಗೆ ಇಳಿಯುವ ಸಾಮಾನ್ಯ ಜನರನ್ನು ಸಾಗಹಾಕುತ್ತಿದ್ದಾರೆ ಎಂದ ಮೇಲೆ ದಾರಿ ಅತಿಕ್ರಮಿಸಿ ತಮ್ಮ ಬಿಸಿನೆಸ್ ದೂರದವರೆಗೂ ಚಾಚಿಕೊಳ್ಳುತ್ತಿರುವವರು ಅದೆಷ್ಟು ಪ್ರಭಾವಿಯಾಗಿರಬೇಡ ಎಂಬುದನ್ನು ಯಾರಾದರೂ ಊಹಿಸಬಹುದಾಗಿದೆ.
ಎಲ್ಲಾ ವಿವಿಐಪಿ ವರ್ತಕರೇ...!
ಪಾದಚಾರಿ ದಾರಿ ಅತಿಕ್ರಮಣ ಪ್ರಯತ್ನ ನಡೆದದ್ದು ಇಲ್ಲಿನ ವಿವಿಐಪಿ ವರ್ತಕರ ಮಳಿಗೆಗಳ ಮುಂದೆಯೇ ಎಂಬುದು ಕಟು ವಾಸ್ತವ. ಫರ್ನಿಚರ್, ಡ್ರೆಸ್ ಮಟೆರಿಯಲ್ ಮಳಿಗೆ, ಹೋಟೆಲ್ಗಳು, ಒಂದು ಕೋಮಿನ ಜನರೇ ಮಳಿಗೆ ಹೊಂದಿರುವ ದಾರಿಗುಂಟ ಕಬಳಿಕೆ ಜೋರಾಗಿದೆ. ಆದರೆ ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಇಂತಹ ಅಪಸವ್ಯಗಳ ಮೇಲೆಲ್ಲಾ ಕಣ್ಣಿಡಬೇಕಾದಂತಹ ಖಾಕಿ ಮಂದಿಯೇ ನಿತ್ಯ ಇದಕ್ಕೆ ಸಾಕ್ಷಿಯಾಗಿ ಸುಮ್ಮನಿರುವಾಗ ಸಾಮಾನ್ಯ ಜನರೆಲ್ಲಿಂದ ಧ್ವನಿ ಎತ್ತಬೇಕು ನೀವೆ ಹೇಳಿ.