ಅಭಿವೃದ್ಧಿಪರ ಹೈ- ಕ ಸಮಿತಿ ರಚನೆ
ಗುಲ್ಬರ್ಗ: ಹೈದ್ರಾಬಾದ್ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಮತ್ತು 371ನೇ (ಜೆ) ಕಲಂ ಅನುಷ್ಠಾನಕ್ಕಾಗಿ ಸರ್ಕಾರದ ಮೇಲೆ ಒತ್ತಡ ತರಲು ಸಮಾನ ಮನಸ್ಕರು ಮತ್ತು ಅಭಿವೃದ್ಧಿ ಪರ ವ್ಯಕ್ತಿಗಳ ಸಭೆಯಲ್ಲಿ ಹೈ-ಕ ಭಾಗದ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಅಭಿವೃದ್ಧಿಪರ ಹೈದ್ರಾಬಾದ್ ಕರ್ನಾಟಕ ಸಮಿತಿ ರಚಿಸಲಾಯಿತು.
ಜನಪರ ಹೋರಾಟಗಾರ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶೌಕತ್ ಅಲಿ ಆಲೂರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಂಘಟನೆಗಳು ಕೇವಲ ಸ್ವಾರ್ಥಕ್ಕಾಗಿ ಹುಟ್ಟಿಕೊಳ್ಳದೆ ಹೈದ್ರಾಬಾದ್ ಕರ್ನಾಟಕ ಭಾಗದ ಜನರ ಜೀವನಾಡಿಯಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಈ ಭಾಗದ ಜನರ ಹೋರಾಟದ ಹಾಗೂ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪರಿಶ್ರಮದಿಂದ 371 (ಜೆ) ಕಲಂ ಜಾರಿಯಾಗಿದ್ದು, ಈ ಅವಕಾಶವನ್ನು ಸಂಘಟನೆಗಳು ಸದುಪಯೋಗ ಪಡಿಸಿಕೊಳ್ಳಲು ಅಭಿವೃದ್ಧಿಯತ್ತ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಮುಖಂಡ ಸಿದ್ದಣ್ಣಾ ರಾಜವಾಳ, ಬಾಬು ಬಿ. ಪಾಟೀಲ್ ಮತ್ತಿತರರು ಮಾತನಾಡಿದರು. ನಾಗೇಂದ್ರ ಚನ್ನೂರ ಅಧ್ಯಕ್ಷತೆ ವಹಿಸಿದ್ದರು.
ನಾಗೇಂದ್ರ ಚನ್ನೂರ- ಅಧ್ಯಕ್ಷ, ಹಣಮಂತ ರಟಕಲ್, ಮುನೀರ್ ಅಹ್ಮದ್ - ಉಪಾಧ್ಯಕ್ಷ, ಆನಂದ ದೇಶಪಾಂಡೆ- ಪ್ರಧಾನ ಕಾರ್ಯದರ್ಶಿ, ಅಮೃತ ಗುರುಪಾದಪ್ಪ, ನಾಗೇಂದ್ರ ಬಾಬುರಾವ್-ಕಾರ್ಯದರ್ಶಿ ಹಾಗೂ ಚಂದ್ರಶೇಖರ ಮದನಕರ್ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು. ಅಲ್ಲದೆ 11 ಜನರನ್ನು ಕಾರ್ಯಕಾರಿ ಮಂಡಳಿ ಸದಸ್ಯರಾಗಿ ನೇಮಕ ಮಾಡಲಾಯಿತು.