ಎಸ್‌ಐ ದಬ್ಬಾಳಿಕೆ: ಆಟೋ ಚಾಲಕರ ಆಕ್ರೋಶ
ಯಾದಗಿರಿ: ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಕೈ ಮಾಡಿದ್ದರಿಂದ ಆಟೋ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿಯ ಸುಭಾಷ ವೃತ್ತದಲ್ಲಿ ನಿಂತಿದ್ದ ಅಟೋ ರಿಕ್ಷಾ ಚಾಲಕರ ಮೇಲೆ ನಗರ ಠಾಣೆ ಪಿಎಸ್‌ಐ ಕೈ ಮಾಡಿದ್ದು, ಚಾಲಕರ ಆಕ್ರೋಶಕ್ಕೆ ಕಾರಣವಾಗಿ ಪ್ರತಿಭಟನೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಅಲ್ಲಿಯೇ ಹೋಗುತ್ತಿದ್ದ ಸಿಪಿಐ ಶಂಕರಗೌಡ ಪಾಟೀಲರಿಗೆ ವಿಷಯ ತಿಳಿಸಿದರು. ನಂತರ ಸಿಪಿಐ ಕಚೇರಿಗೆ ಆಗಮಿಸಿದ ಅಟೋ ಚಾಲಕರು, ಸಬ್ ಇನ್ಸ್‌ಪೆಕ್ಟರ್ ವರ್ತನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನಮ್ಮಿಂದಲೂ ತಪ್ಪಾಗುತ್ತದೆ. ಆದರೆ ನಮ್ಮ ಮೇಲೆ ಕೈ ಮಾಡುವುದು ಸರಿಯಲ್ಲ. ಈ ಕುರಿತು ಅಧಿಕಾರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು. ಆಟೋ ಚಾಲಕರ ಜತೆ ಮಾತನಾಡಿದ ಸಿಐ ಶಂಕರಗೌಡ ಪಾಟೀಲ, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಿಕ್ಷಾ ಚಾಲಕರೂ ಸಂಚಾರ ನಿಯಮಗಳನ್ನು ಪಾಲಿಸಬೇಕು. ಸಂಚಾರ ನಿಯಂತ್ರಣಕ್ಕೆ ಪೊಲೀಸರಿಗೆ ಸಹಕಾರಿಸಲು ಸಲಹೆ ನೀಡಿದರು. ನಂತರ ಪ್ರತಿಭಟನೆ ಕೈಬಿಡಲು ನಿರ್ಧರಿಸಿದ ಆಟೋ ಚಾಲಕರು, ಪೊಲೀಸ್ ಇಲಾಖೆಗೆ ಸಹಕಾರ ನೀಡಲಾಗುವುದು. ನಮ್ಮ ಜೊತೆ ಸೌಜನ್ಯದಿಂದ ವರ್ತಿಸಲು ಪೊಲೀಸರಿಗೆ ನಿರ್ದೇಶನ ನೀಡಿ ಎಂದು ಮನವಿಸಿದರು.