ನಿಬಂಧನೆ ಉಲ್ಲಂಘಿಸಿ ವಿದ್ಯುತ್ ತಂತಿ ಅಳವಡಿಕೆ
ಕನ್ನಡಪ್ರಭ ವಾರ್ತೆ ಸೇಡಂ ಜೂ.30
ಪಟ್ಟಣದ ಹೃದಯ ಭಾಗದಿಂದ ವಾಸವದತ್ತಾ ಸಿಮೆಂಟ್ ಕಂಪನಿಗೆ ಹಾದುಹೋಗಿರುವ ರೇಲ್ವೆ ಹಳಿಗಳ ಮೇಲೆ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಅಳವಡಿಸಬಾರದೆಂದು ಎನ್ನುವ ಸೇಡಂ ನ್ಯಾಯಾಲಯದ ಆದೇಶವಿದ್ದರೂ, ಆದೇಶ ಉಲ್ಲಂಘಿಸಿ ವಿದ್ಯುತ್ ಸಂಪರ್ಕಕ್ಕೆ ಅವಕಾಶ ನೀಡದಂತೆ ಸೇಡಂ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಈಗಾಗಲೇ ಹಲವು ಬಾರಿ ರೇಲ್ವೆ ಹಳಿಯನ್ನು ಸ್ಥಳಾಂತರಿಸಿ ಸೇಡಂ ನಾಗರಿಕರಿಗೆ ಆಗುತ್ತಿರುವ ನಿರಂತರ ತೊಂದರೆಯನ್ನು ನೀಗಿಸುವಂತೆ ಹಲವಾರು ಪ್ರತಿಭಟನೆ ಹಾಗೂ ಹೋರಾಟಗಳನ್ನು ಮಾಡಲಾಗಿದೆ. ಆದರೆ ಸಿಮೆಂಟ್ ಕಂಪನಿಯು ಸೇಡಂ ನ್ಯಾಯಾಲಯದ ಆದೇಶ, ನಾಗರಿಕರ ಅಹವಾಲುಗಳಿಗೂ ಕಿಮ್ಮತ್ತು ಕೊಡದೆ ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ಕಳೆದ 22ರಂದು ರೇಲ್ವೆ ಹಳಿಗಳಿಗೆ ವಿದ್ಯುತ್ ವೈರ್ ಅಳವಡಿಸಿದ್ದು ಕಂಪನಿಯ ಧೋರಣೆ ಸೇಡಂ ನಾಗರಿಕರ ಹಿತಾಸಕ್ತಿಯ ವಿರುದ್ಧವಾಗಿದೆ.
ಸಂಚಾರಕ್ಕೂ ತೊಂದರೆ: 1984- 85ರಲ್ಲಿ ಕಂಪನಿ ತನ್ನ ಒಂದು ಯುನಿಟ್ ಸ್ಥಾಪಿಸಿತ್ತು. ಆದರೆ ಈಗ 4 ಯುನಿಟ್ಗಳನ್ನು ಕಂಪನಿ ಹೊಂದಿದ್ದು ರೈಲು ಸಂಚಾರ ಹೆಚ್ಚಾಗಿದೆ. ಒಂದು ರೈಲು ರಸ್ತೆ ದಾಟಲು ಸುಮಾರು 20 ನಿಮಿಷಕ್ಕೂ ಮೇಲ್ಪಟ್ಟು ಕಾಯಬೇಕಾದ ಪರಿಸ್ಥಿತಿ ಇದ್ದು, ಇದರಿಂದ ಸಾರ್ವಜನಿಕರಿಗೆ ತಿರುಗಾಡಲು ತೀವ್ರ ತೊಂದರೆ ಎದುರಾಗಿದೆ.
ಹಳಿಯ ಒಂದೆಡೆ ಬಸ್ ನಿಲ್ದಾಣ, ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಪರಿವೀಕ್ಷಣಾ ಮಂದಿರ ಇನ್ನಿತರ ಪ್ರಮುಖ ಕಚೇರಿಗಳು ಇದ್ದು ಹಾಗೆಯೇ ರಾಜ್ಯಾದ್ಯಂತ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಿವೆ, ಇನ್ನೊಂದೆಡೆ ಸರ್ಕಾರಿ ಹೆರಿಗೆ ಆಸ್ಪತ್ರೆ, ರೈಲು ನಿಲ್ದಾಣ ಹಾಗೂ ಶಾಲಾ- ಕಾಲೇಜುಗಳಿದ್ದು, ತುರ್ತು ಪರಿಸ್ಥಿತಿಯಲ್ಲಿ ಉದಾಹರಣೆಗೆ ಊರಲ್ಲಿ ಏನಾದರೂ ಬೆಂಕಿ ಅನಾಹುತದಂತಹ ಅವಘಡಗಳು ಸಂಭವಿಸಿದರೆ ಆ ಕಡೆ ಇರುವ ಅಗ್ನಿಶಾಮಕ ವಾಹನಗಳು, ಆ್ಯಬುಲನ್ಸ್ ಸಂಚಾರ ಸುಗಮವಾಗದೆ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತಿದೆ.
ನ್ಯಾಯಾಲಯ ಆದೇಶ ಉಲ್ಲಂಘನೆ: ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಸೇಡಂ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯವಾದಿ ಆರ್.ಎಸ್.ಪಾಟೀಲ್ ಮತ್ತು ಇತರರು ಸಿವಿಲ್ ದಾವೆ ಹೂಡಿದ್ದು, ನ್ಯಾಯಾಲಯವು ಸಹ ರೈಲು ಹಳಿಗಳಿಗೆ ಕಂಬ ಹಾಗೂ ವಿದ್ಯುತ್ ತಂತಿ ಅಳವಡಿಸಬಾರದೆಂದು ನಿಬಂಧಕ ಆಜ್ಞೆ ವಿಧಿಸಿದೆ.
ಆದರೆ ಅದನ್ನು ಮೀರಿ ರೇಲ್ವೆ ಹಳಿಗಳಿಗೆ ವಿದ್ಯುತ್ ವೈರ್ ಅಳವಡಿಸುತ್ತಿರುವುದು ನ್ಯಾಯಾಲಯ ಆದೇಶ ಉಲ್ಲಂಘನೆಯಾಗಿದೆ. ಅಲ್ಲದೆ ಇದರಿಂದ ಮುಂದೆ ಹಲವು ಅನಾಹುತಗಳಾಗುವ ಸಂಭವವಿದೆ ಎಂದು ಸೇಡಂ ಠಾಣೆಯ ಆರಕ್ಷಕ ಉಪ ನಿರೀಕ್ಷಕರಿಗೆ ಸಲ್ಲಿಸಿದ ಮನವಿಯಲ್ಲಿ ಸೇಡಂ ಹಿತರಕ್ಷಣಾ ಸಮಿತಿಯ ಆರ್.ಎಸ್. ಪಾಟೀಲ್, ಅಫಜಲ್ಖಾನ, ಬಾಬುರಾವ ಮಿಸ್ಕಿನ್ ತಿಳಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿ ಸೇಡಂ ಸಿವಿಲ್ ನ್ಯಾಯಾಲಯದಲ್ಲಿ ಸಮಾಜ ಸೇವಕ ಗುಂಡಪ್ಪ ಎಂಬುವರು ಸಲ್ಲಿಸಿದ ಮತ್ತೊಂದು ದಾವೆಯೂ ಸಹ ಬಾಕಿಯಿದೆ.
ಹಳಿ ಮೇಲೆಯೇ ಅಪಘಾತ...
ರೇಲ್ವೆ ಹಳಿಗಳಿಂದ ಸೇಡಂ ಸಾರ್ವಜನಿಕರಿಗೆ ಆಗುತ್ತಿರುವ ಹಲವಾರು ರೀತಿಯ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ರೇಲ್ವೆ ಹಳಿ ಸ್ಥಳಾಂತರಕ್ಕೆ ಹಲವು ಹೋರಾಟ ರೂಪಿಸಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಸೇಡಂನ ಹಿರಿಯ ನ್ಯಾಯವಾದಿ ಆರ್.ಎಸ್. ಪಾಟೀಲರು ಒಂದು ತಿಂಗಳ ಹಿಂದೆ ಕೋರ್ಟಿನಿಂದ ಮನೆಗೆ ಹಿಂದಿರುಗುವಾಗ ಅದೇ ರೈಲು ಹಳಿಯ ಅಪಘಾತಕ್ಕೀಡಾಗಿದ್ದು ಎರಡು ಕಾಲು ಒಂದು ಕೈ ಮುರಿದಿದ್ದು ತೀವ್ರ ಗಾಯಗೊಂಡಿದ್ದಾರೆ. ಪಟ್ರಿ ಹಠಾವೋ, ಸೇಡಂ ಬಚಾವೋ ಎನ್ನುವ ಸ್ಲೋಗನ್ ಹೇಳುತ್ತಾ ಹೋರಾಟ ಮಾಡಿದರೋ ಅದೇ ಹಳಿಗೆ ಸಿಲುಕಿ ಅಪಘಾತವಾಗಿದ್ದು ಕಾಕತಾಳಿಯವೋ ಏನೋ ಎನ್ನುವಂತಾಗಿದೆ.