ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಡ ಕುಟುಂಬಕ್ಕೆ ಶಾಪವಾಗಿರುವ ರೋಗ

Mainashree
Updated On : 1 Jul 2013, 11:08 am

ಶಹಾಪುರ: ಬಡ ಕುಟುಂಬಕ್ಕೇ ಹೆಚ್ಚು ಕಷ್ಟ ಬರುತ್ತದೆಯೋ ಗೊತ್ತಿಲ್ಲ. 10 ವರ್ಷವಾದರೂ ಇನ್ನೂ ಹಲ್ಲು ಬಾರದೇ, ಎದೆಯಲ್ಲಿ ವಿಶಿಷ್ಟ ಗಂಟು ಬಂದು ಬಳಲುತ್ತಿರುವ ಮಗ ಒಂದೆಡೆಯಾದರೆ, ಮತ್ತೊಬ್ಬಳು ನಾಲ್ಕು ವರ್ಷದ ಮಗಳೂ ಇದೇ ರೀತಿಯ ಕಾಯಿಲೆಯಿಂದ ಬಳಲುತ್ತಿರುವ ಯಾತನಾದಾಯಕ ಬುದುಕು ಸಾಗಿಸುತ್ತಿದೆ ಇಲ್ಲೊಂದು ಕುಟುಂಬ.
ಶಹಾಪುರ ಮತಕ್ಷೇತ್ರ ವ್ಯಾಪ್ತಿಯ ಸುರಪುರ ತಾಲೂಕಿನ ನಗನೂರು ಗ್ರಾಮದ ಕಾಲುವೆ ಬಳಿ ಹೊಲವೊಂದರಲ್ಲಿ ಬದುಕು ಕಟ್ಟಿಕೊಂಡಿರುವ ಬಸವರಾಜ ಎಂಬವರ ಕಣ್ಣೀರಿನ ಕತೆಯಿದು. ಇವರ ನಾಲ್ಕು ಜನ ಮಕ್ಕಳ ಪೈಕಿ ಬೈಲಪ್ಪ ಎಂಬ 10 ವರ್ಷದ ಬಾಲಕನ ಬಾಯಲ್ಲಿ ಹಲ್ಲು ಬರುವ ಲಕ್ಷಣವೇ ಕಾಣುತ್ತಿಲ್ಲ. ಅಲ್ಲದೇ ದೊಡ್ಡಗಾತ್ರದ ವಿಶಿಷ್ಟ ರೀತಿಯ ಆಕಾರದ ತಲೆ, ಎದೆಯಲ್ಲಿ ದೊಡ್ಡ ಗಂಟು ಬಂದಿರುವುದು, 4 ವರ್ಷದ ಮಗಳಿಗೂ ಹಲ್ಲು ಬಾರದೇ ಬಳಲುತ್ತಿದ್ದಾಳೆ.
ಚಿಕಿತ್ಸೆಗೆ ಹಣವಿಲ್ಲ: ಕೂಲಿನಾಲಿ ಮಾಡಿಯೇ ಜೀವನ ಸಾಗಿಸುತ್ತಿರುವ ಬಸವರಾಜನ ಕುಟುಂಬಕ್ಕೆ ಮಕ್ಕಳದೇ ಚಿಂತೆಯಾಗಿದೆ. ಒಟ್ಟು ನಾಲ್ಕು ಮಕ್ಕಳಲ್ಲಿ ಇಬ್ಬರು ಅಲ್ಲಲ್ಲಿ ಕೂಲಿ ಮಾಡುತ್ತಿದ್ದರೆ. ಮತ್ತಿಬ್ಬರು ಮಕ್ಕಳು ಮಾತ್ರ ಯಾವಾಗಲೂ ನಿಸ್ತೇಜರಾಗಿರುತ್ತಾರೆ. ಅವರ ಆರೈಕೆಯೇ ಬಸವರಾಜ ಹಾಗೂ ಆತನ ಪತ್ನಿಗೆ ದೊಡ್ಡ ಕೆಲಸವಾಗಿದೆ. ಇದಕ್ಕೆ ಚಿಕಿತ್ಸೆ ಕೊಡಿಸಬೇಕೆಂದರೂ ಇವರ ಬಳಿ ಹಣವಿಲ್ಲ. ಆದ್ದರಿಂದ ನಿತ್ಯವೂ ಕಣ್ಣೀರಿನಲ್ಲೇ ಈ ಬಡ ಕುಟುಂಬ ಕೈತೊಳೆದುಕೊಳ್ಳುತ್ತ ಜೀವನ ಸಾಗಿಸುವಂತಾಗಿದೆ.
ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಹೊತ್ತಿರುವ ಬಸವರಾಜ ದಂಪತಿ ಕಣ್ಣೀರು ಸುರಿಸುತ್ತಾರೆ. ನೋಡ್ರಿ, ಈ ಇಬ್ಬರು ಮಕ್ಳಿಗಿ ಆರೋಗ್ಯ ಸುಧಾರಿಸಲಿಕ್ಕಿ ಸಹಾ ಯಮಾಡ್ಲಿಕ್ಕಿ ಸರ್ಕಾದವರು ಮುಂದೆ ಬಂದ್ರ ಬಹಳ ಅನುಕೂಲ ಆಗ್ತದರಿ. ನಮ್ಗ ರೇಷನ್ ಕಾರ್ಡ್ ಇಲ್ಲ, ಮಕ್ಳಿಗಿ ಯಾವ ಸಹಾಯ ಇಲ್ಲ ಎಂದು ಇಬ್ಬರು ಮಕ್ಕಳ ಪರಿಸ್ಥಿತಿಯ ಬಗ್ಗೆ ತಂದೆ ಬಸವರಾಜ ಹೇಳುತ್ತಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇವರ ಸಹಾಯಕ್ಕೆ ಬಂದು ಈ ಬಡ ಕುಟುಂಬದ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು  ಸಾಮಾಜಿಕ ಕಳಕಳಿಯ ಸೇವಾಲಾಲ್ ತಾಂಡಾದ ತುಳಜಾರಾಮ ಚವ್ಹಾಣ, ರೇಖ ರಾಠೋಡ, ಭೀಮನಗೌಡ ಗೌಡಿಗೇರಿ ಮನವಿ ಮಾಡಿದ್ದಾರೆ. ನೆರವು ನೀಡಲು: 99803-47588.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement