ಮತ್ತೆ ಸ್ಪರ್ಧಿಸುವೆ: ಶಶೀಲ್ ನಮೋಶಿ
ಚಿತ್ತಾಪುರ: ಮುಂದೆ ನಡೆಯವ ವಿಧಾನ ಪರಿಷತ್ ಶಿಕ್ಷಕರ ಮತ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವುದಾಗಿ ವಿಧಾನಪರಿಷತ್ ಮಾಜಿ ಸದಸ್ಯ ಶಶೀಲ್ ನಮೋಶಿ ತಿಳಿಸಿದ್ದಾರೆ.
ತಾಲೂಕಿನ ರಾವೂರ ಗ್ರಾಮದ ಸಚ್ಚಿದಾನಂದ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಪ್ರತಿ ಬಾರಿ ಶಿಕ್ಷಕರ ಮತ ಕ್ಷೇತ್ರದಿಂದ ಗೆದ್ದು ಶಿಕ್ಷಕರ ಸಮುದಾಯದ ಸೇವೆ ಮಾಡಿದ್ದೇನೆ. ಸಚಿವನಾಗುವ ಆಸೆ ಹೊತ್ತು ಕಳೆದ ಬಾರಿ ವಿಧಾನಸಭೆಯತ್ತ ಚಿತ್ತ ಹರಿಸಿದ್ದೆ ತಪ್ಪಾಯಿತು ಎಂದರು.
ಬಿಜೆಪಿಯಿಂದ ಟಿಕೆಟ್ ನಿರಾಕರಿಸಲಾಗಿತ್ತು. ಆಗ ದಾರಿ ಕಾಣದೇ ಕೆಲ ಬೆಂಬಲಿಗರ ಒತ್ತಡದಿಂದಾಗಿ ಬೇರೆ ಪಕ್ಷದಿಂದ ಸ್ಪರ್ಧಿಸಿ ಸೋಲಬೇಕಾಯಿತು. ಇದು ನನ್ನ ಜೀವನದ ಅತ್ಯಂತ ಕಹಿ ಘಟನೆಯಾಗಿದೆ. ಬಿಜೆಪಿ ತೊರೆದಿರುವುದಕ್ಕೆ ಹಲವರು ಬೆಂಬಲಿಗರು ಬೇಸರ ವ್ಯಕ್ತಪಡಿಸಿದ್ದಾರೆ. ನಿಮ್ಮನ್ನೆ ನಂಬಿದ ನಮ್ಮನ್ನು ನಡು ನೀರಲ್ಲಿ ಕೈಬಿಟ್ಟಿರಿ ಎಂದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಭಾವನಾತ್ಮಕವಾಗಿ ಮಾತನಾಡಿದ್ದಾರೆ ಎಂದರು.
ನನಗೂ ಮಾತೃ ಪಕ್ಷ ಬಿಜೆಪಿ ಬಿಟ್ಟು ತಪ್ಪು ಮಾಡಿದ ನೋವು ಕಾಡುತ್ತಿದೆ. ಹೀಗಾಗಿ ಅಭಿಮಾನಿಗಳ ಹಾಗೂ ಬೆಂಬಲಿಗರ ಒತ್ತಡಕ್ಕೆ ಮಣಿದು ಮಾತೃ ಪಕ್ಷ ಬಿಜೆಪಿಗೆ ಶೀಘ್ರ ಮರಳುವ ನಿರ್ಧಾರ ಮಾಡಿದ್ದೇನೆ. ಮುಂದಿನ ಕೆಲ ದಿನಗಳಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರುತ್ತೇನೆ ಎಂದು ಅವರು ಸ್ಪಷ್ಟ ಪಡಿಸಿದರು.ಮುಖಂಡರಾದ ಡಾ. ಗುಂಡಣ್ಣ ಬಾಳಿ, ಶಿವರಾಜ ಪಂಚಾಳ, ಭೀಮಶ್ಯಾ ಜೀರೊಳ್ಳಿ, ರಾಮಚಂದ್ರರೆಡ್ಡಿ, ಬಸಲಿಂಗಪ್ಪ ಬಾಳಿ, ಶರಣು ಜ್ಯೋತಿ, ಸುಭಾಷ ವರ್ಮಾ ಹಾಗೂ ಸಂಸ್ಥೆ ಸಿಬ್ಬಂದಿ ಉಪಸ್ಥಿತರಿದ್ದರು.