ರೈತರಿಗೆ ಉಚಿತ ಬೀಜ, ಕ್ರಿಮಿನಾಶಕ ವಿತರಣೆ
ಯಾದಗಿರಿ: ತಾಲೂಕಿನ ಹತ್ತಿಕುಣಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಭಾನುವಾರ ರೈತರಿಗೆ ಉಚಿತವಾಗಿ ತೊಗರಿ ಬೀಜ ಹಾಗೂ ಕ್ರಿಮಿನಾಶಕಗಳನ್ನು ವಿತರಿಸಲಾಯಿತು.
ಕೃಷಿ ಅಧಿಕಾರಿ ವಿಶ್ವನಾಥ ಮಾತನಾಡಿ, ಮುಂಗಾರು ಬೆಳೆಗಳಿಗೆ ಬರುವ ರೋಗಗಳನ್ನು ರೈತರು ತಡೆಗಟ್ಟುವ ಕ್ರಮ ಹಾಗೂ ಕ್ರಿಮಿನಾಶಕ ಸಿಂಪಡಿಸುವ ವಿಧಾನ ವಿವರಿಸಿದರು. ಕಳೆ ನಿರ್ವಹಣೆ ಮಾಡುವ ಪೆಂಡಿ ಮಿತಲೀನ್ ಕ್ರಿಮಿನಾಶಕ ಬಳಕೆ ಮಾಡುವಾಗ ರೈತರು ಅಗತ್ಯ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ರೈತರೊಂದಿಗೆ ಅವರ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಮಾಹಿತಿ ನೀಡಿದರು. ಗ್ರಾಮದ ರೈತರಾದ ಸಂಜೀವಕುಮಾರ ಪುಟಗಿ, ಭೀಮರಡ್ಡಿ ಕೌಳೂರ, ಶರಣಪ್ಪ ದ್ಯಾರಾನೋರ, ಸಿದ್ದಣ್ಣಗೌಡ ಪಾಟೀಲ್ ಇತರರು ಇದ್ದರು.