ಹಾಸ್ಟೆಲ್ ಅವ್ಯವಸ್ಥೆ: ಶ್ರೀಲಕ್ಷ್ಮೀ ಅಸಮಾಧಾನ
ಗುರುಮಠಕಲ್: ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮೀ ಚಂಡ್ರಕಿ ಹಠಾತ್ ಭೇಟಿ ನೀಡಿ, ಅಲ್ಲಿಯ ವ್ಯವಸ್ಥೆ ಕಂಡು ದಂಗಾದರು. ಮೇಲ್ವಿಚಾರಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು, ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ನೀಡುವಂತೆ ತಾಕೀತು ಮಾಡಿದರು.
ಪಟ್ಟಣದ ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿ ನಂತರ ಬಾಲಕಿಯರ ಹಾಸ್ಟೆಲ್‌ಗೆ ಬಂದು ಅಲ್ಲಿ ಮಕ್ಕಳಿಗೆ ನೀಡುತ್ತಿರುವ ಊಟ ಹಾಗೂ ಇನ್ನಿತರ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದರು. ವಸತಿ ನಿಲಯದಲ್ಲಿ ಬೆಳಗ್ಗೆ ನೀಡಬೇಕಾದ ಉಪಾಹಾರವನ್ನು ಮಧ್ಯಾಹ್ನ ನೀಡುತ್ತಾರೆ. ಮಧ್ಯಾಹ್ನದ ಸಮಯದಲ್ಲಿ ನೀಡಬೇಕಾದ ಊಟವನ್ನು ಬೆಳಗ್ಗೆ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಸೊಳ್ಳೆಗಳ ಕಾಟ: ಅಳವಡಿಸಿರುವ ಮಾಹಿತಿ ಫಲಕದಲ್ಲಿ ಸೂಚಿಸಿದಂತೆ ತಿಂಡಿ ನೀಡುತ್ತಿಲ್ಲ. ಚಪಾತಿಗಳಿಗೆ ಎಣ್ಣೆ ಬದಲು ನೀರು ಹಚ್ಚುತ್ತಾರೆ. ಮೊಟ್ಟೆ, ಬಾಳೆಹಣ್ಣುಗಳನ್ನು ನೀಡುತ್ತಿಲ್ಲ. ವಸತಿ ನಿಲಯದಲ್ಲಿ ಸರಿಯಾದ ಲೈಟ್ ಹಾಗೂ ಫ್ಯಾನ್‌ಗಳಿಲ್ಲದೆ ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ದಿನಾಲೂ ನರಕಯಾತನೆ ಪಡುವಂತಾಗಿದೆ. ಕಳೆದ ಎರಡು ವರ್ಷಗಳಿಂದ ವಸ್ತ್ರಗಳನ್ನು ವಿತರಣೆ ಮಾಡಿಲ್ಲ. ಶಾಲೆ ಪ್ರಾರಂಭವಾಗಿ ತಿಂಗಳು ಕಳೆದರೂ ನೋಟ್ ಬುಕ್‌ಗಳನ್ನು ನೀಡಿಲ್ಲ. ಶೌಚಾಲಯ ಸ್ವಚ್ಛ ಮಾಡುವವರೇ ಇಲ್ಲವೆಂದು ಬಾಲಕಿಯರು ತಿಳಿಸಿದರು.
ತೊಂದರೆ: ಇದರಿಂದ ಕೋಪಗೊಂಡ ಅಧ್ಯಕ್ಷೆ ಶ್ರೀಲಕ್ಷ್ಮೀ, ನಿಮ್ಮ ಮಕ್ಕಳಿಗೆ ಈ ಪರಿಸ್ಥಿತಿ ಬಂದರೆ ಏನು ಮಾಡುತ್ತೀರಿ. ಸರ್ಕಾರದಿಂದ ಬಂದ ಸೌಲಭ್ಯಗಳನ್ನು ಮಕ್ಕಳಿಗೆ ನೀಡಲು ಏಕೆ ತೊಂದರೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ಗಾವಣೆಗೆ ಒತ್ತಾಯ: ಈ ಹಿಂದೆ ಇದ್ದ ಮೇಲ್ವಿಚಾರಕರು ನಮಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದರು. ಆದರೆ ಈಗಿರುವ ಮೇಲ್ವಿಚಾರಕರು ಯಾವುದಕ್ಕೂ ಸ್ಪಂದಿಸುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಗಮನ ನೀಡುತ್ತಿಲ್ಲ. ಈ ಬಗ್ಗೆ ಅಧಿಕಾರಗಳ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.