ದೇಶಕ್ಕೆ ಸಹಕಾರ ಕ್ಷೇತ್ರಗಳ ಕೊಡುಗೆ ಅಪಾರ: ಗೋನಾಯಕ
ಗುಲ್ಬರ್ಗ: ದೇಶಕ್ಕೆ ಸಹಕಾರ ಕ್ಷೇತ್ರಗಳ ಕೊಡುಗೆ ಅಪಾರ, ಸಹಕಾರ ಕ್ಷೇತ್ರದ ಬುನಾದಿ ಮೇಲೆ ಸರ್ಕಾರ ನಡೆಯುವಂತಾಗಬೇಕೆಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಸೋಮಶೇಖರ ಗೋನಾಯಕ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ನಡೆದ ಗುಲ್ಬರ್ಗ-ಯಾದಗಿರಿ ಜಿಲ್ಲೆಗಳ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಕಾರ್ಯದರ್ಶಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲರೂ ಆರ್ಥಿಕವಾಗಿ ಸ್ಪತಂತ್ರರಾಗಲು ಸಹಕಾರ ಕ್ಷೇತ್ರಗಳು ಬೆಳೆದು ನೆರವಾಗಬೇಕು. ಸರ್ಕಾರದ ಹಲವಾರು ರಂಗಗಳ ಆರ್ಥಿಕ ವಲಯದಲ್ಲಿ ಪತ್ತಿನ ಸಹಕಾರ ಸಂಘಗಳಿಗೆ ಕೊಟ್ಯಂತರ ಲಾಭವಾಗುತ್ತಿದೆ. ಮುಂಬೈ-ಕರ್ನಾಟಕ ಭಾಗದಲ್ಲಿ ಸಹಕಾರ ಸಂಘಗಳು ಮುಂಚೂಣಿಯಲ್ಲಿವೆ. ಆದ್ದರಿಂದ ಸಹಕಾರ ಸಂಘ-ಸಂಸ್ಧೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಿ ಸಹಾಯ ಮಾಡಲು ಮುಂದಾಗಬೇಕೆಂದು ತಿಳಿಸಿದರು.
ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶರಣಬಸಪ್ಪ ಬೆಣ್ಣೊರೆ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಬೇಕಾದರೆ ಅದರ ಅರಿವು ಮತ್ತು ಕಾರ್ಯವ್ಯಾಪ್ತಿ ತಿಳಿದಿರಬೇಕು ಎಂದರು.
ರಾಜ್ಯ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಸಿದ್ರಾಮರೆಡ್ಡಿ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಲಫಲ ಮಠದ ಮಹಾಂತ ಶಿವಾಚಾರ್ಯರು ಸಾನ್ನಿದ್ಯ ವಹಿಸಿದ್ದರು. ಯೂನಿಯನ್ ಅಧ್ಯಕ್ಷ ಭೀಮನಗೌಡ ಪಾಟೀಲ್, ಕೆಪಿಟಿಸಿಎಲ್ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಹಾಗರಗಿ, ಚನ್ನಮಲೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಿನಾಥ ಹೊಸಮನಿ, ಈಶ್ವರಪ್ಪ ಬಾಸೂತ್ಕರ್, ಹನುಮಾಕ್ಷಿ ಗೋಗಿ, ಟಿ. ಪೈರೋಜ, ವಿಶ್ವನಾಥ ಮಲಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಸಾರ್ವಜನಿಕ ಸಂಪರ್ಕಾಧಿಕಾರಿ ಎಚ್.ಎಸ್ ಪೂರ್ಣಿಮಾ ಪ್ರಾಸ್ತಾವಿಕ ಮಾತನಾಡಿದರು. ಶೈಲಜಾ ಚವ್ಹಾಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.