ಬಜೆಟ್: ಪ್ರಸ್ತಾಪವಿಲ್ಲದ ಹಣದುಬ್ಬರ ನಿಯಂತ್ರಣ ಕ್ರಮ
ಗುಲ್ಬರ್ಗ: ಪ್ರಸ್ತುತ ಮುಂಗಡ ಪತ್ರವು ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಪ್ರಸ್ತಾಪಿಸಿರುವುದಿಲ್ಲ ಹಾಗೂ ಸಾಧಿಸಿದ ಶೇ.9 ಜಿಡಿಪಿ ಅಭಿವೃದ್ಧಿ ದರವನ್ನು ಪುನಃ ಹೊಂದುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೈ.ಕ. ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಲಾದ ಅಭಿವೃದ್ಧಿಪರ ಯೋಜನೆಗಳ ಕುರಿತು ಸಂಸ್ಥೆಯ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಗೌರವ ಸಹ ಕಾರ್ಯದರ್ಶಿ ಸಂದೀಪ ಎಲ್. ಜವಳ್ಕರ್ ಮತ್ತು ಗುರುದೇವ ದೇಸಾಯಿ ಸ್ವಾಗತಿಸಿದ್ದಾರೆ.
ಬೆಂಗಳೂರು ಮುಂಬಯಿ ಕೈಗಾರಿಕಾ ಕಾರಿಡಾರ ಸ್ಥಾಪನೆ, ರಾಷ್ಟ್ರದ ಜಿಡಿಪಿಯಲ್ಲಿ ಶೇ. 12 ಪ್ರತಿಶತ ನೆರವಾಗುವ ಎಂಎಸ್ಎಂಇ ಕ್ಷೇತ್ರಕ್ಕೆ ನೀಡಿರುವ ರಿಯಾಯತಿ, ಎಂಎಸ್ಎಂಇಗಳಿಗೆ 3 ವರ್ಷಗಳವರೆಗೆ ತೆರಿಗೆ ಪಾವತಿಸುವಲ್ಲಿ ವಿನಾಯತಿ, ಸಾಲ ಖಾತ್ರಿ ಬಂಡವಾಳದಡಿಯಲ್ಲಿ ಎಸ್ಐಡಿಬಿಐ ಮುಖಾಂತರ 500 ಕೋಟಿ ನೆರವು, ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಿಳಾ ಸಶಕ್ತೀಕರಣದ ದಿಶೆಯಲ್ಲಿ ಮಹಿಳಾ ಸಹಕಾರಿ ಬ್ಯಾಂಕಿನ ಸ್ಥಾಪನೆಗಾಗಿ 1000 ಕೋಟಿ ಮೀಸಲು, ರೈತರಿಗಾಗಿರುವ ಸಾಲದ ಯೋಜನೆಗಳನ್ನು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳಲ್ಲದೆ ಖಾಸಗಿ ಬ್ಯಾಂಕ್ಗಳ ಮುಖಾಂತರ ಕೂಡ ಸಾಲ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.