ರೈಲು ಸರಕು ಸಾಗಣೆ ದರ ಹೆಚ್ಚಳ: ಕೈಗಾರಿಕೆಗಳ ಬೆಳವಣಿಗೆಗೆ ಪೆಟ್ಟು
ಗುಲ್ಬರ್ಗ: ರೈಲು ಸರಕು ಸಾಗಣೆ ದರವನ್ನು ಹೆಚ್ಚಳ ಮಾಡಿರುವುದರಿಂದ ಹಿಂದುಳಿದ ಪ್ರದೇಶಗಳಲ್ಲಿನ ಕೈಗಾರಿಕೆಗಳ ಬೆಳವಣಿಗೆಗೆ ಪೆಟ್ಟು ಬೀಳಲಿದೆ ಎಂದು ಹೈದ್ರಾಬಾದ್ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಗೌರವ ಕಾರ್ಯದರ್ಶಿ ಬಸವರಾಜ ಹಡಗಿಲ್ ಹಾಗೂ ಆಡಳಿತ ಮಂಡಳಿ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಗದಗ- ವಾಡಿ ಮಾರ್ಗ ಸಮೀಕ್ಷೆ ಮಾಡಲು ಹಣ ನೀಡಿ ಘೋಷಣೆ ಮಾಡಿರುವುದು, ರಾಯಚೂರು ಪಾಂಡುರಂಗ ರೈಲು ಸ್ವಾಮಿ ರೈಲು ಮಾರ್ಗ ನೀಡಲು ಒಪ್ಪಿರುವುದು ಒಳ್ಳೆಯ ಕ್ರಮ ಎಂದು ಸ್ವಾಗತಿಸಿದ್ದಾರೆ. ಪ್ರಯಾಣ ದರ ಏರಿಕೆ ಮಾಡದೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ವಾಡಿ ಜಂಕ್ಷನ್ ರೈಲು ನಿಲ್ದಾಣವನ್ನು ಐಲ್ಯಾಂಡ್ ಫ್ಲಾಟ್ ಪಾರಂ ರಚಿಸಿ ಮೇಲ್ದರ್ಜೆಗೇರಿಸಿದ್ದರೆ, ಈ ಭಾಗದ ಜನರಿಗೆ ಇನ್ನಷ್ಟು ರೈಲುಗಳ ಸೇವೆಯನ್ನು ಬಳಸಿಕೊಳ್ಳಲು ಅನುಕೂಲವಾಗುತ್ತಿತ್ತು. ಅದನ್ನು ಕಡೆಗಣಿಸಿದ್ದನ್ನು ಖಂಡಿಸಿದ್ದಾರೆ.
ಹೈ-ಕ ಭಾಗದ ಬೇಡಿಕೆಯಾದ ಗುಲ್ಬರ್ಗದಲ್ಲಿ ವಿಭಾಗೀಯ ರೇಲ್ವೆ ಕೇಂದ್ರ ಸ್ಥಾಪಿಸುವ ಕುರಿತು ಯಾವುದೇ ಪ್ರಸ್ತಾವನೆ ಬಗ್ಗೆಯಾಗಲಿ, ಸೋಲಾಪುರ -ಯಶವಂತಪುರ ರೈಲು ಸಂಚಾರವನ್ನು ಪ್ರತಿನಿತ್ಯ ನಡೆಸುವ ಬಗ್ಗೆ ಪ್ರಸ್ತಾವನೆ ನೀಡಿಲ್ಲ.
ಸುಮಾರು ಹತ್ತು ವರ್ಷಗಳ ಹಿಂದೆ ಪ್ರಾರಂಭವಾದ ರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದ ಗುಲ್ಬರ್ಗ-ಬೀದರ್ ಹೊಸ ರೈಲು ಮಾರ್ಗ ಪೂರ್ಣಗೊಳಿಸುವ ಬಗ್ಗೆ ಈ ವರ್ಷದ ಮುಂಗಡಪತ್ರದಲ್ಲಿ ಗುಲ್ಬರ್ಗದಿಂದ ಸುಲ್ತಾನಪುರದ ವರೆಗೆ ಕೇವಲ 7 ಕಿ.ಮೀ ಕಾಮಗಾರಿಯನ್ನು ಪೂರ್ತಿಗೊಳಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ರೈಲು ಮಾರ್ಗವು ಪೂರ್ಣಗೊಳ್ಳಲು ಇನ್ನು ಕನಿಷ್ಠ 8-10 ವರ್ಷ ಬೇಕಾಗುತ್ತದೆಂದು ಎಚ್ಕೆಸಿಸಿಐ ತಿಳಿಸಿದೆ.