ಪಾಲಿಕೆ ಅಖಾಡ; ಭ್ರಷ್ಟರ ವಿರುದ್ಧ ಕಾಂತಾ ಧರ್ಮಯುದ್ಧ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.2
ಈಗಾಗಲೇ ಪಾಲಿಕೆ ಟಿಕೆಟ್ ಹಂಚಿಕೆಯಲ್ಲಿ ತಮ್ಮ ಮಾತುಗಳಿಗೆ ಕಾಸಿನ ಕಿಮ್ಮತ್ತೂ ನೀಡಿಲ್ಲ, ಪಕ್ಷವನ್ನು ಕಷ್ಟಕಾಲದಲ್ಲಿ ಕಟ್ಟಿ ಬೆಳೆಸಿದ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಪರ್ಧೆಗಿಳಿಯುವ ಅವಕಾಶ ದೊರಕಿಲ್ಲವೆಂದು ಮುನಿಸಿಕೊಂಡು ಜೆಡಿಎಸ್ಗೆ ರಾಜಿನಾಮೆ ನೀಡಿರುವ ಮಾಜಿ ಸಚಿವ, ಜನಪರ ಹೋರಾಟಗಾರ ಎಸ್.ಕೆ. ಕಾಂತಾ ಇದೀಗ ಸ್ಥಳೀಯವಾಗಿ ಪಾಲಿಕೆ ಅಖಾಡದಲ್ಲಿರುವ ಭ್ರಷ್ಟರು, ವಂಚಕರು, ಸುಳ್ಳು ಮಾಹಿತಿ ನೀಡಿ ಸರ್ಕಾರಕ್ಕೇ ಪಂಗನಾಮ ಹಾಕುವ ಸಮಯಸಾಧಕರುಗಳ ಬಣ್ಣ ಬಯಲು ಮಾಡುವ ಸಂಕಲ್ಪ ಮಾಡಿದ್ದಾರೆ.
ಜೆಡಿಎಸ್ಗೆ ರಾಜಿನಾಮೆ ನೀಡಿದ್ದಾಯ್ತು, ಬರುವ ದಿನಗಳಲ್ಲಿ ಯಾವ ರಾಜಕೀಯ ಪಕ್ಷವನ್ನೂ ಸೇರಲಾರೆ, ಎಲ್ಲೆಡೆ ಮೋಸ- ಭ್ರಷ್ಟಾಚಾರ ತಾಂಡವವಾಡುತ್ತಿದೆ. ತಾವು ಸಾರಿರುವ ಈ ಧರ್ಮಯುದ್ಧದಲ್ಲಿ ತಮ್ಮ ಕೈಲಾದಷ್ಟು ಶ್ರಮ ವಹಿಸುವುದಾಗಿ ಘೋಷಿಸಿದ್ದಾರೆ.
ಇಲ್ಲಿನ ಕನ್ನಡಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂತಾ, ಮಾಜಿ ಮೇಯರ್ ಅಷ್ಪಾಕ್ ಚುಲಬುಲ್ ಆದಾಯ ಘೋಷಣೆಯಲ್ಲಿ ಸುಳ್ಳು ಹೇಳಿದ್ದಾರೆ. ಹಿಂದೆಯೂ ಪಾಲಿಕೆ ಸದಸ್ಯೆಯಾಗಿದ್ದ ಆರತಿ ತಿವಾರಿಯವರ ವಿರುದ್ಧ ತಾವೇ ನೂರಬಾಗ್ ಹಾಗೂ ಇನ್ನೊಂದು ಖಾಸಗಿ ಪ್ರಕರಣದಲ್ಲಿ ದೂರು ದಾಖಲಿಸಿದ್ದಾಗಿ ಹೇಳುತ್ತ ಇಂತಹವರಿಗೆ ಜೆಡಿಎಸ್ ಟಿಕೆಟ್ ನೀಡಿದರೆ ಪಕ್ಷದ ಪರವಾಗಿ ಇವರನ್ನೆಲ್ಲ ಗೆಲ್ಲಿಸಿ ಎಂದು ತಾವು ಅದ್ಹೇಗೆ ಪ್ರಚಾರ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಜೆಡಿಎಸ್ ಅಷ್ಟೇ ಯಾಕೆ, ಇತರೆ ಪಕ್ಷಗಳಲ್ಲಿಯೂ ಭ್ರಷ್ಟರಿದ್ದಾರೆ. ಇಂತಹ ಭ್ರಷ್ಟರ ಕೂಟದ ವಿರುದ್ಧ ಈ ಚುವನಾವಣೆಯಲ್ಲಿ ಪ್ರಚಾರ ಮಾಡಬೇಕು, ಇವರನ್ನೆಲ್ಲ ಸೋಲಿಸಿ ಎಂದು ಜನಜಾಗೃತಿ ಮೂಡಿಸಬೇಕು ಎಂಬುದೇ ತಮ್ಮ ಸದಿಚ್ಫೆ ಎಂದು ಕಾಂತಾ ಹೇಳಿದ್ದಾರೆ.
ಸುಳ್ಳು ಆದಾಯ ಪತ್ರ: ಕಳೆದ ಪಾಲಿಕೆ ಚುನಾವಣೆಯಲ್ಲಿ(2007 ಇಸ್ವಿ) ಸ್ಪರ್ಧಿಸಿ ಗೆದ್ದು ಮೇಯರ್ ಆಗಿರುವ ಅಷ್ಪಾಕ್ ಅಹ್ಮದ್ ಚುಲಬುಲ್ ಆಸ್ತಿಪಾಸ್ತಿ ಕುರಿತಂತೆ ಸರ್ಕಾರಕ್ಕೆ ಸಲ್ಲಿಸಿರುವ ದಾಖಲೆಗಳನ್ನೆಲ್ಲ ಕಲೆ ಹಾಕಿದ್ದಾರೆ. ಚುಲಬುಲ್ ಶಿಕ್ಷಣ ಸಂಸ್ಥೆಯ ಒಡೆಯ. ಆದಾಗ್ಯೂ ತಹಸೀಲ್ದಾರ್ ದಾಖಲೆಯಲ್ಲಿ ತಮ್ಮ ವಾರ್ಷಿಕ ಆದಾಯ ಕೇವಲ 25 ಸಾವಿರ ಎಂದು ತೋರಿಸಿಕೊಂಡಿದ್ದಾರೆ ಎಂದು ಆದಾಯ ಘೋಷಣೆಯಲ್ಲಿನ ಚುಲ್ಬುಲ್ ಹಿಕ್ಮತ್ತಿನ ನಡೆಯನ್ನು ವಿವರಿಸಿದರು.
ಈ ಸಂಬಂಧ ತಾವು ಸಂಗ್ರಹಿಸಿರುವ ಧೃಢೀಕೃತ ದಾಖಲೆಗಳನ್ನೆಲ್ಲ ಮಾಧ್ಯಮಗಳಿಗೆ ಪ್ರದರ್ಶಿಸಿದ ಕಾಂತಾ ಇಂತಹ ಮೋಸಗಾರರು ಈಗ ಮತ್ತೆ ಕಣದಲ್ಲಿದ್ದಾರೆ. ಇವರಿಗೆ ಮತ ಹಾಕಿ ಗೆಲ್ಲಿಸಿದರೆ ಜನತೆಗೆ ಇವರು ಮರಳಿ ಕೊಡುವುದಾದರೂ ಏನನ್ನ ಎಂದು ಪ್ರಶ್ನಿಸಿದರು.
ನೂರಬಾಗ್ ನೆನಪು ಮಾಡಿಕೊಡುವೆ:ಮಾಜಿ ಸಚಿವ ಖಮರುಲ್ ಇಸ್ಲಾಂ ಸಹೋದರನಿಗೆ ಸಂಬಂಧಿಸಿದಂತೆ ಇರುವ ನೂರಬಾಗ್ ನಿವೇಶನ ಹಂಚಿಕೆ, ಮಾರಾಟ ಹಗರಣಕ್ಕೆ ಸಂಬಂಧಿಸಿದಂತೆ ತಾವು ನೀಡಿರುವ ದೂರನ್ನಾಧರಿಸಿ ಸ್ಟೇ ಬಂದಿತ್ತು.
ಆದರೆ ಈ ಪ್ರಕರಣದಲ್ಲಿ ಪಾಲಿಕೆ ಕಾಮಗಾರಿ ಸಥಾಯಿ ಸಮಿತಿಯವರು ತಡೆಯಾಜ್ಞೆಯನ್ನೂ ಲೆಕ್ಕಿಸದೆ ಅನುಮತಿ ನೀಡಿದ್ದಾರೆ. ಅಂತಹ ಸ್ಥಾಯಿ ಸಮಿತಿಗೆ ಆರತಿ ತಿವಾರಿ ಅಧ್ಯಕ್ಷರಾಗಿದ್ದರು. ಅವರ ಅವಧಿಯಲ್ಲೇ ಈ ಬೆಳವಣಿಗೆ ನಡೆದಿತ್ತು. ಇದಲ್ಲದೆ ಇವರು ಬ್ರಹ್ಮಪುರ ಬಡಾವಣೆಯಲ್ಲಿನ ಸರ್ಕಾರಿ ಜಾಗ ಕಬಳಿಕೆ ಪ್ರಕರಣದಲ್ಲೂ ಇಂತಹದ್ದೇ ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾಂತಾ ಜೆಡಿಎಸ್ನ ಜೊತೆಗೆ ಬಿಜೆಪಿ, ಕಾಂಗ್ರೆಸ್, ಕೆಜೆಪಿ, ಬಿಎಸ್ಆರ್ ಪಕ್ಷಗಳಿಂದಲೂ ಪಾಲಿಕೆ ಅಖಾಡದಲ್ಲಿರುವ ಭ್ರಷ್ಟರು, ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವವರ ವಿರುದ್ಧ ತಾವೇ ಮುಂದಾಗಿ ಜಾಗೃತಿಯಾತ್ರೆ ನಡೆಸುವುದಾಗಿ ಹೇಳಿದರು. ತಮ್ಮ ಇತಿಮಿತಿಯೊಳಗೆ ಬಡಾವಣೆಗಳಲ್ಲಿ ಸುತ್ತಿ ಜನರನ್ನು ಈ ವಿಚಾರಗಳ ಬಗ್ಗೆ ತಿಳಿ ಹೇಳುವುದಾಗಿಯೂ ಕಾಂತಾ ಹೇಳಿದ್ದಾರೆ.
ಇದ್ದವರಿಗೆ ಕಿಮ್ಮತ್ತಿಲ್ಲ, ಬಂದವರದೇ ಎಲ್ಲ: ಗುಲ್ಬರ್ಗ ಜೆಡಿಎಸ್ನಲ್ಲಿ ನಿಷ್ಠೆಯಿಂದ ಇದ್ದು ಕೆಲಸ ಮಾಡಿದ, ಪಕ್ಷ ಸಂಘಟನೆಗೆ ಪ್ರಯತ್ನಿಸಿದವರಿಗೆ ಕಿಮ್ಮತ್ತೇ ಇಲ್ಲದಂತಾಗಿದೆ. ಈ ಮಾತಿಗೆ ಪಾಲಿಕೆ ಸೇರಿದಂತೆ ವಿವಿಧೆಡೆ ಪಕ್ಷದಲ್ಲಿ ಕಂಡಿರುವ ಟಿಕೆಟ್ ಹಂಚಿಕೆ ಬೆಳವಣಿಗೆಗಳೇ ಸಾಕ್ಷಿ. ಇಂತಹ ಪಕ್ಷದಲ್ಲಿ ಮುಂದುವರಿದು ಪ್ರಯೋಜನವಾದರೂ ಏನು ಎಂದು ಕಾಂತಾ ಬೇಸರ ಹೊರಹಾಕಿದರು.
ಜಮೀರ್ ಅಹ್ಮದ್ ಸೇರಿದಂತೆ ಹಲವರು ಟಿಕೆಟ್ ಹಂಚಿಕೆ ವಿಚಾರವಾಗಿ ಚರ್ಚಿಸಲು ತಮ್ಮ ಕಚೇರಿಗೆ ಆಗಮಿಸಿದ್ದರು. ಬಂದವರೊಂದಿಗೆ ಮಾತುಕತೆ ಆಡಿದೆ. ಆ ಸಂದರ್ಭ ನಮ್ಮವರೇ ಆಗಿರುವ 5 ಕಾರ್ಯಕರ್ತರಿಗೆ ಪಾಲಿಕೆ ಟಿಕೆಟ್ ಕೇಳಿದೆ. ಐವರಲ್ಲಿ ಮೂವರಿಗಂತೂ ಟಿಕೆಟ್ ನೀಡುವ ಗಟ್ಟಿ ಭರವಸೆ ದೊರಕಿತ್ತು. ಕೊನೆ ಹಂತದಲ್ಲಿ ಯಾರಿಗೂ ಟಿಕೆಟ್ ದಕ್ಕಲಿಲ್ಲ. ಯಾಕೆ ಇಂತಹ ವಿಚಿತ್ರ ನಡೆಯಿತೋ ಗೊತ್ತಿಲ್ಲ. ಸುಳ್ಳು ಹೇಳುವ ನಾಯಕರಿಂದಲೇ ಪಕ್ಷ ಇಲ್ಲಿ ಹಾಳಾಗಿದೆ ಎಂದು ಖಾರವಾಗಿ ನುಡಿದರು.
ಖಚಿತವಾಗಿತ್ತು: ಮೋಮಿನಪುರಾ ಹೋರಾಟದಲ್ಲಿದ್ದ ಅಂಗವಿಕಲ ಕಾರ್ಯಕರ್ತ ಮಂಜೂರ ಪಟೇಲ್, ಹಬೀಬ್ ಬಾರ್, ಅಸ್ಲಂ ಕಲ್ಯಾಣಿ, ಭವಾನಿ ವಳಕೇರಿ, ದಿಲೀಪ ಹೊಡಲ್, ಗುಲಾಮ್ ಮಂಗಲ್, ನೀತಾ ಮೈನಾಳಕರ್ ಇವರು ಕಣಕ್ಕಿಳಿಯುವ ಪಕ್ಷದ ನಿಷ್ಠಾವಂತರಾಗಿದ್ದರು. ಇವರು ಕಣದಲ್ಲಿದ್ದರೆ ಗೆಲವು ಖಚಿತವಾಗಿತ್ತು. ಈ ವಾಸ್ತವ ಪಕ್ಷದಲ್ಲಿ ಹೊರಗಿನಿಂದ ಬಂದ ನಾಯಕರ ಅರಿವಿಗೆ ಬರಲೇ ಇಲ್ಲ. ಈ ಬೆಳವಣಿಗೆಯಿಂದ ನೊಂದು ರಾಜಿನಾಮೆ ನೀಡಿದೆ. ಈಗ ಪಕ್ಷದಿಂದ ಅನೇಕರು ರಾಜಿನಾಮೆ ನೀಡಿ ಹೊರಬಂದಿದ್ದಾರೆ ಎಂದರು.
ರಾಜಿನಾಮೆ ನಂತರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರೇ ಖುದ್ದು ಹತ್ತಾರು ಬಾರಿ ತಮ್ಮನ್ನು ಸಂಪರ್ಕಿಸುವ ಪ್ರಯತ್ನವಾಗಿ ದೂರವಾಣಿ ಕರೆಗಳನ್ನು ಮಾಡಿದ್ದರೂ ತಾವು ಅವರೊಂದಿಗೆ ಮಾತುಕತೆ ನಡೆಸುವ ಗೋಜಿಗೂ ಹೋಗಿಲ್ಲ. ಪಕ್ಷಕ್ಕೆ ಮರಳುವ ಇರಾದೆಯೇ ಇಲ್ಲವೆಂದ ಮೇಲೆ ಗೌಡರ ಕರೆ ಸ್ವೀಕರಿಸಿ ಫಲವೇನು ಎಂದು ಬೇಸರಿಸಿದರು. ತಮ್ಮನ್ನೇ ನಂಬಿರುವ ಕಾರ್ಯಕರ್ತರೆಲ್ಲರೂ ತಮ್ಮ ಅನುಕೂಲಕ್ಕೆ ಪೂರಕವಾಗಿ ನಿರ್ಣಯಿಸುವಷ್ಟು ಸಮರ್ಥರಿದ್ದಾರೆ. ಅವರ ನಿಲುವುಗಳ ಬಗ್ಗೆ ತಮ್ಮದು ಯಾವುದೇ ತಕರಾರಿಲ್ಲ ಎಂದರು.
ಭವಾನಿ ವಳಕೇರಿ, ಗಂಗೂಬಾಯಿ ವಳಕೇರಿ, ಅಸ್ಲಂ ಕಲ್ಯಾಣಿ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.