ಮೆಹೆಬೂಬ್ ಸಾಬ್ 'ಅತ್ಯುತ್ತಮ ಅಂಚೆಯಣ್ಣ'
ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ, ಗುಲ್ಬರ್ಗ, ಮಾ.2
ಕೊರಿಯರ್ ಸೇವೆ ಬಂದು ಅಂಚೆ ಸೇವೆಗೆ ಪೈಪೋಟಿ ಒಡ್ಡಿದರೂ ಅಂಚೆ ಸೇವೆಯ ಮೇಲಿನ ನಂಬಿಕೆ ಮಾಸಿಲ್ಲ. ಅದರಲ್ಲೂ ಮೆಹೆಬೂಬ್ ಸಾಬ್ರಂಥ ಚುರುಕಿನ ಕೆಲಸಗಾರರಿರುವ ತನಕ ಈ ಸೇವೆಗೆ ಸರಿಸಾಟಿ ಇನ್ನೊಂದಿಲ್ಲ ಎನ್ನಬಹುದು.
ಏಕೆಂದರೆ ಗುಲ್ಬರ್ಗ ಮುಖ್ಯ ಅಂಚೆ ಕಚೇರಿಯಲ್ಲಿ ಪೋಸ್ಟ್ಮನ್ ಆಗಿರುವ ಮೆಹೆಬೂಬ್ ಕುರಿಕೋಟಾ ಓಲೆ ಹಂಚುವಲ್ಲಿ ತೋರಿರುವ ಚಾಕಚಕ್ಯತೆಗೆ ರಾಜ್ಯ ಮಟ್ಟದಲ್ಲೂ ಗಮನ ಸೆಳೆದಿದ್ದಾರೆ. ತಮ್ಮ ಈ ಕೆಲಸಕ್ಕೆ ರಾಜ್ಯ ಮಟ್ಟದಲ್ಲಿ 'ಅತ್ಯುತ್ತಮ ಅಂಚೆಯಣ್ಣ' ಎಂಬ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ. ಈ ಮೂಲಕ ಗುಲ್ಬರ್ಗ ಅಂಚೆ ಇಲಾಖೆ ಹೆಸರು ರಾಜ್ಯ ಮಟ್ಟದಲ್ಲಿ ಪತಿಧ್ವನಿಸುವಂತೆ ಮಾಡಿದ್ದಾರೆ.
ರಾಜ್ಯದ 30 ಜಿಲ್ಲೆಗಳ ಪೈಕಿ ಮೆಹೆಬೂಬ್ ಸಾಬ್ ನಿತ್ಯ ನೂರಕ್ಕೆ ನೂರು ಪತ್ರಗಳ ಬಟವಡೆ ಕಾರ್ಯ ಪೂರೈಸುತ್ತಾರೆ ಎಂದು ಅಂಚೆ ಇಲಾಖೆ ಕರ್ನಾಟಕ ವಲಯ ಇವರಿಗೆ 4,500 ನಗದು, ಪ್ರಶಸ್ತಿ ಫಲಕ, ಶಾಲು ನೀಡಿ ಸತ್ಕರಿಸಿದೆ.
ಕಳೆದೆಂಟು ವರ್ಷಗಳಿಂದಲೂ ಈ ಕೆಲಸ ಮಾಡುತ್ತಿರುವ ಮೆಹೆಬೂಬ್ ಬಿಕಾಂ ಪದವೀಧರ. ಇಲಾಖೆ ಸೇರಿದ ವರ್ಷದಿಂದ ಇಲ್ಲಿಯರೆಗೂ ಇವರ ಹಸಿಬೆ(ಚೀಲ) ಸೇರುವ ಲಕೋಟೆಗಳು, ಪತ್ರಗಳು, ರಜಿಸ್ಟರ್ಡ್ ಪೋಸ್ಟ್ಗಳು, ಸ್ಪೀಡ್ ಪೋಸ್ಟ್ಗಳ ಕವರ್ಗಳು ಯಾವುವೂ ಹಂಚಿಕೆಯಾಗದೆ ಉಳಿದುಕೊಂಡಿಲ್ಲ.
ಋಣ ಮರೆಯಲಿ ಹ್ಯಾಂಗ: ಸಾಬ್ರ ಗುಲ್ಬರ್ಗದ ಮೂಲ್ಯಾಗ ಇದ್ದು ಪತ್ರ ಕೊಡೋರಿಗೆ ಇಲಾಖೆ ಕರ್ದು ಸನ್ಮಾನ ಮಾಡ್ಯಾರ್ರಿ. ಇಲಾಖೆ ಋಣ ಹ್ಯಾಂಗ ಮರಿಬೇಕು ಹೇಳ್ರಿ? ಎಂದು ಪ್ರಶ್ನಿಸುವ ಮೆಹೆಬೂಬ್ ಸಾಬ್ ತನ್ನ ಈ ಕೆಲಸದ ಬಗ್ಗೆ, ಇಲಾಖೆ ಬಗ್ಗೆ ಹೆಮ್ಮೆ ಪಡುತ್ತಾರೆ.
ಸೂಪರ್ ಮಾರ್ಕೆಟ್ ಎಸ್ಬಿಎಚ್ ಕಚೇರಿಯಿಂದ ಶುರುವಾಗುವ ಮೆಹೆಬೂಬ್ ಸಾಬ್ನ ಓಲೆ ಹಂಚುವ ಕಾಯಕ ಜಗತ್, ಗಾಜಿಪೂರ ಹೀಗೆ ಸಾಗುತ್ತದೆ. ಬೆಳಗಿನ ಸುತ್ತು ಪೂರೈಸಿದ ನಂತರ ಬೆಂಗಳೂರು ಲಕೋಟೆಗಳು ಬರುವ ಮಧ್ಯಾಹ್ನದ ಸುತ್ತನ್ನೂ ಇವರು ಮಾಡಿ ಮುಗಿಸುತ್ತಾನೆ.
ಕಾಯಕದಲ್ಲಿ ನಿಷ್ಠೆ ಇಟ್ಟುಕೊಂಡು ಪ್ರಾಮಾಣಿಕವಾಗಿ ತಮ್ಮ ಪಾಡಿಗೆ ತಾವು, ಏನನ್ನೂ ಬಯಸದೆ ನಿರಂತರ ಕೆಲಸ ಮಾಡುತ್ತ ಸಾಗುವ ಇಂಥ ಕರ್ಮಯೋಗಿಗಳ ಸಂತತಿ ಸಾವಿರವಾಗಲಿ ಎಂಬುದೇ ಹಾರೈಕೆ.