'ಕುಡಿವ ನೀರಿನ ಸಮಸ್ಯೆ ನಿವಾರಿಸಿ'
ಯಾದಗಿರಿ: ತಾಲೂಕಿನ ಕಿಲ್ಲನಕೇರಾ ಗ್ರಾಮದ ಹರಿಜನ ವಾಡದಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕೂಡಲೇ ನೀರಿನ ಸಮಸ್ಯೆ ನಿವಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಕರ್ನಾಟಕ ದಸಂಸ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ರಿಗೆ ಮನವಿ ಸಲ್ಲಿಸಿದರು.
ಸುಮಾರು ಒಂದೂವರೆ ತಿಂಗಳಿಂದ ಹರಿಜನ ವಾಡದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದೆ. ಗ್ರಾಮದಲ್ಲಿನ ಪಂಚಾಯಿತಿ ಕಾರ್ಯಾಲಯಕ್ಕೆ ಅನೇಕ ಬಾರಿ ಮನವಿ ಮಾಡಿಕೊಂಡಿದ್ದರೂ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳು ನಿಷ್ಕಾಳಜಿ ತೋರಿಸಿ ದಲಿತರ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ ಎಂದು ದೂರಿದ್ದಾರೆ.
ಗ್ರಾಪಂ ಪಿಡಿಒ ಯಾವಾಗಲೂ ಮೊಬೈಲ್ ಸ್ವಿಚ್ ಆಫ್ ಮಾಡಿರುತ್ತಾರೆ. ಕಿರಿಯ ಎಂಜಿನಿಯರ್ ಅವರನ್ನು ಸಂಪರ್ಕಿಸಿದರೆ ತಮಗೂ ಕುಡಿವ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದರು.
--
ರೈತರಿಗೆ ತಂತ್ರಜ್ಞಾನ ಒದಗಿಸಲು ಆಗ್ರಹ
ಯಾದಗಿರಿ: ಹತ್ತಿ ಬೆಳೆಯ ಕಳೆ ನಿವಾರಣೆ ಮಾಡಲು ರೈತರಿಗೆ ಬೋಲ್ಗಾರ್ಡ್ ರೌಂಡಪ್ ರೆಡಿ ಫೆಕ್ಸ್ ಎಂಬ ಹೊಸ ತಂತ್ರಜ್ಞಾನ ಒದಗಿಸಬೇಕು ಎಂದು ಆಗ್ರಹಸಿ ರೈತರು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಹೊಸ ತಂತ್ರಜ್ಞಾನದಿಂದ ಹತ್ತಿ ಬೆಳೆ ಕಳೆಯನ್ನು ಸಮರ್ಥವಾಗಿ ನಿವಾರಣೆ ಮಾಡಬಹುದು. ಜೊತೆಗೆ ವೆಚ್ಚ ಸಹ ಕಡಿಮೆಗೊಳಿಸುತ್ತದೆ. ಹತ್ತಿ ಬೆಳೆದ ರೈತರು ನೆಮ್ಮದಿಯಾಗಿರಲು ಬೋಲ್ಗಾರ್ಡ್ ರೌಂಡಪ್ ರೆಡಿ ಫೆಕ್ಸ್ ತಂತ್ರಜ್ಞಾನ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಹತ್ತಿ ಕಳೆ ನಿವಾರಿಸಲು ಸಾಕಷ್ಟು ಪ್ರಮಾಣದಲ್ಲಿ ಕಾರ್ಮಿಕರು ಸಿಗುತ್ತಿಲ್ಲ. ಅವರ ಕೂಲಿ ಬೆಲೆ ಹೆಚ್ಚಾಗಿದೆ. ಬೇರೆ ಊರುಗಳಿಂದ ಕೂಲಿಗಳಿಗೆ ಹೆಚ್ಚು ಕೂಲಿ ನೀಡಬೇಕಾಗಿದೆ. ರೈತರು ಕಂಗಾಲಾಗಿದ್ದಾರೆ. ಹತ್ತಿ ಬೆಳೆ ಕಳೆ ನಿವಾರಣೆಗೆ ಸಾಕಷ್ಟು ವೆಚ್ಚ ಭರಿಸಬೇಕಾಗುತ್ತದೆ. ಇದರಿಂದ ನಷ್ಟ ಎದುರಿಸುತ್ತಿದ್ದಾರೆ. ಹೊಸ ತಂತ್ರಜ್ಞಾನ ಒದಗಿಸಿ ಕೊಟ್ಟರೆ ಅನುಕೂಲ ಎಂದರು.