ಕೋಟ್ಯಂತರ ರು. ಅವ್ಯವಹಾರ?; ತನಿಖೆಗೆ ಆಗ್ರಹ
ಯಾದಗಿರಿ: ಶಹಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆಗಳಲ್ಲಿ ಕೈಗೊಂಡಿರುವ ಕಾಮಗಾರಿಯಲ್ಲಿ ಕೋಟ್ಯಂತರ ರು. ಅವ್ಯವಹಾರವಾಗಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆಯಲು ಶಾಸಕ ಶರಣಬಸವಪ್ಪಗೌಡ ದರ್ಶನಾಪುರ ಅವರ ಕೈವಾಡ ಅಡಗಿದೆ ಎಂದು ಮುಖಂಡ ಗುರು ಪಾಟೀಲ ಶಿರವಾಳ ಗಂಭೀರ ಆರೋಪ ಮಾಡಿದ್ದಾರೆ.
ಇಲ್ಲಿಯ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತ ದಾಖಲೆಗಳನ್ನು ಪ್ರದರ್ಶಿಸಿ ಮಾಹಿತಿ ನೀಡಿದರು. ಒಂದೇ ಕಾಮಗಾರಿ ಹೆಸರಿನಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಅನುದಾನ ಒದಗಿಸಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. 2008- 09ನೇ ಸಾಲಿನಿಂದ ಇಲ್ಲಿದವರೆಗೆ ಸುಮಾರು 22 ಕೋಟಿಗೂ ಹೆಚ್ಚು ಅನುದಾನ ವಿವಿಧ ಯೋಜನೆಗಳಿಂದ ಪುರಸಭೆಗೆ ಲಭ್ಯವಾಗಿದೆ. ಆದರೆ ಇವುಗಳಲ್ಲಿ ಅರ್ಧದಷ್ಟು ಹಣ ದುರುಪಯೋಗವಾಗಿರುವ ಶಂಕೆಯಿದೆ. ಹಿಂದಿನ ವರ್ಷ ಕೈಗೊಂಡ ಕಾಮಗಾರಿಯನ್ನೇ ಮತ್ತೊಂದು ಯೋಜನೆಯಲ್ಲಿ ಹಾಕಿ ಹಣ ಎತ್ತಲಾಗಿದೆ ಎಂದು ದೂರಿದರು.
ಸಮಗ್ರ ತನಿಖೆಯಾಗಲಿ: ಸ್ಥಳೀಯ ಶಾಸಕರ ಕುಮ್ಮಕ್ಕು ಇಲ್ಲದೇ ಇಂಥ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಆದ್ದರಿಂದ ಈ ಕುರಿತು ಸಮಗ್ರ ತನಿಖೆ ಕೈಗೊಂಡರೆ ದೊಡ್ಡ ಪ್ರಕರಣವೇ ಬಹಿರಂಗವಾಗಲಿದೆ. ಈ ಕುರಿತು ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗುವುದು. ಪಟ್ಟಣದ ಅಭಿವೃದ್ಧಿಗೆ ಬಂದ ಅನುದಾನ ದುರುಪಯೋಗ ಪಡಿಸಿಕೊಂಡಿರುವವರ ಕುರಿತು ಜನರೇ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
13ನೇ ಹಣಕಾಸು ಯೋಜನೆ, ಮುಖ್ಯಮಂತ್ರಿಗಳ ವಿಶೇಷ ಅನುದಾನ, ಪ್ರಕೃತಿ ವಿಕೋಪ, ಶಾಸಕರ ಅನುದಾನ ಹೀಗೆ ವಿವಿಧ ಯೋಜನೆಗಳಲ್ಲಿ ಬಂದ ಅನುದಾನ ದುರ್ಬಳಕೆಯಾಗಿದೆ.
ಬಂದ ಅನುದಾನ ವ್ಯರ್ಥ: ಶಾಸಕ ದರ್ಶನಾಪುರ ಅವರು ತಮ್ಮ ಸಂಬಂಧಿಕರಿಗೆ ಅನೇಕ ಕಾಮಗಾರಿಗಳ ಗುತ್ತಿಗೆ ನೀಡಿದ್ದಾರೆ. ಸ್ವಾರ್ಥ ಸಾಧನೆಗಾಗಿ ಅವರು ಪಟ್ಟಣದ ಹಳೇ ಬಸ್ ನಿಲ್ದಾಣವನ್ನೂ ಲೀಸ್ಗೆ ಕೊಡಿಸುತ್ತಿರುವ ಶಂಕೆಯೂ ಇದೆ. ಪುರಸಭೆಗೆ ಬಂದ ಅನುದಾನವೆಲ್ಲ ವ್ಯರ್ಥವಾಗಿದೆ. ಆದ್ದರಿಂದ ಪಟ್ಟಣದ ಅನೇಕ ವಾರ್ಡುಗಳಲ್ಲಿ ಇನ್ನೂ ಅಭಿವೃದ್ಧಿ ಕಂಡಿಲ್ಲ ಎಂದು ಗುರು ಪಾಟೀಲ ಆರೋಪಿಸಿದರು.
ಒಂದೇ ಕಾಮಗಾರಿಗೆ 3 ಅನುದಾನ: ವಾರ್ಡ್ ನಂ. 6ರಲ್ಲಿ ಸಿಬಿ ಕಮಾನಿನಿಂದ ದಿಗ್ಗಿ ಬೇಸ್ವರೆಗೆ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಯನ್ನು 2009- 10ರಲ್ಲಿ ನೆರೆ ಪರಿಹಾರ ನಿಧಿಯಲ್ಲಿ ಭೂಸೇನಾ ನಿಗಮದಿಂದ 13.5 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇದೇ ಕಾಮಗಾರಿಯನ್ನು 2011- 12ನೇ ಸಾಲಿನಲ್ಲಿ ಮತ್ತೆ 12.5 ಲಕ್ಷ ವೆಚ್ಚದಲ್ಲಿ ಮಾಡಲಾಗಿದೆ. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಚರಂಡಿ ಮತ್ತು ರಸ್ತೆ ಡಾಂಬರೀಕರಣದ ಒಂದೇ ಕಾಮಗಾರಿಯನ್ನು ಮೂರು ಯೋಜನೆಯಲ್ಲಿ ಅನುದಾನ ಬಳಸಲಾಗಿದೆ. 2011- 12ನೇ ಸಾಲಿನಲ್ಲಿ 13ನೇ ಹಣಕಾಸಿ ಯೋಜನೆಯಲ್ಲಿ 13.51 ಲಕ್ಷ, ಎಸ್ಎಫ್ಸಿ ಯೋಜನೆಯಲ್ಲಿ 2008- 09ನೇ ಸಾಲಿನಲ್ಲಿ 13 ಲಕ್ಷ ಹಾಗೂ 09- 10ನೇ ಸಾಲಿನಲ್ಲಿ 13.08 ಲಕ್ಷ ಅನುದಾನ ಖರ್ಚು ಮಾಡಲಾಗಿದೆ.
ವಾರ್ಡ್ ನಂ. 23ರಲ್ಲಿ ರವಿ ಪತ್ತಾರ ಮನೆಯಿಂದ ಶರಣಗೌಡ ಆಲ್ದಾಳ ಮನೆವರೆಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ 2009- 10ರಲ್ಲಿ ಎಸ್ಎಫ್ಸಿ ಯೋಜನೆಯಲ್ಲಿ 3.70 ಲಕ್ಷ ಹಾಗೂ ಅದೇ ಕಾಮಗಾರಿಯನ್ನು ಸಿಎಂಎಸ್ಎಂಟಿಡಿಪಿ ಯೋಜನೆಯಲ್ಲಿ ಮತ್ತೆ 3.70 ಲಕ್ಷ ವೆಚ್ಚದಲ್ಲಿ ನಡೆಸಲಾಗಿದೆ. ಯಾದಗಿರಿಗೆ ಹೋಗುವ ಮುಖ್ಯ ರಸ್ತೆಯಿಂದ ಬಾಲಕಿಯರ ವಸತಿಗೃಹದವರೆಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ಎಸ್ಎಫ್ಸಿ ಯೋಜನೆಯಲ್ಲಿ 7.15 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಮತ್ತೆ ಅದೇ ಕಾಮಗಾರಿಗೆ 6.50 ಲಕ್ಷ ವ್ಯಯಿಸಲಾಗಿದೆ.
ಇಲ್ಲದ ಕಾಮಗಾರಿಗೆ ಅನುದಾನ: ವಾರ್ಡ್ ನಂ.23ರಲ್ಲಿ ಸಿಸಿ ರಸ್ತೆ, ಮುಚ್ಚು ಚರಂಡಿ ಕಾಮಗಾರಿಗೆ 2009- 10ನೇ ಸಾಲಿನಲ್ಲಿ ಪ್ರಕೃತಿ ವಿಕೋಪ ಪರಿಹಾರ ಯೋಜನೆಯಲ್ಲಿ 5 ಲಕ್ಷ ಅನುದಾನ ಒದಗಿಸಲಾಗಿದೆ. ಆದರೆ ಇಲ್ಲಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯೇ ಇಲ್ಲ. ಸರ್ಕಾರಿ ಪಪೂ ಕಾಲೇಜು ಕಾಂಪೌಂಡ್ ನಿರ್ಮಾಣವನ್ನು ಕಾಲೇಜು ಶಿಕ್ಷಣ ಇಲಾಖೆಯಿಂದ 4 ಲಕ್ಷ ಅನುದಾನದಲ್ಲಿ ಕೈಗೊಳ್ಳಲಾಗಿದೆ. ಆದರೆ ಅದೇ ಕಾಮಗಾರಿಗೆ ಎಸ್ಎಫ್ಸಿ ಯೋಜನೆಯಲ್ಲಿ 4 ಲಕ್ಷ ಖರ್ಚು ಹಾಕಲಾಗಿದೆ.
ಎಸ್ಸಿ, ಎಸ್ಟಿ ಕಾಲನಿಯಲ್ಲಿ ಹೈಮಾಸ್ಟ್ ದೀಪ ಅಳವಡಿಕೆಗೆ ಬಿಆರ್ಜಿಎಫ್ ಯೋಜನೆಯಲ್ಲಿ 13.41 ಲಕ್ಷ ಖರ್ಚು ಹಾಕಲಾಗಿದೆ. ಆದರೆ ಕಾಮಗಾರಿ ಸ್ಥಳದಲ್ಲಿ ಬೀದಿ ದೀಪ ಅಳವಡಿಕೆಯನ್ನೇ ಮಾಡಿಲ್ಲ. ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿವಿಧ ಯೋಜನೆಗಳ ಹೆಸರಿನಲ್ಲಿ 1 ಕೋಟಿ ರು. ಹಣ ವಿನಿಯೋಗಿಸಲಾಗಿದೆ. ಆದರೆ ಅಲ್ಲಿ ಸುಮಾರು 20 ಲಕ್ಷ ಮೊತ್ತದ ಕಾಮಗಾರಿ ಮಾತ್ರ ಕಣ್ಣಿಗೆ ಕಾಣುತ್ತದೆ ಎಂದು ತಿಳಿಸಿದ ಅವರು, 50ಕ್ಕೂ ಹೆಚ್ಚು ಕಾಮಗಾರಿಯಲ್ಲಿ ಎರಡು ಹಾಗೂ ಅದಕ್ಕಿಂತ ಹೆಚ್ಚು ಬಾರಿ ಖರ್ಚು ಹಾಕಿರುವುದರ ಕುರಿತ ದಾಖಲೆ ಪ್ರದರ್ಶಿಸಿದರು.
ದಾಖಲೆ ಸಂಗ್ರಹ: ಚುನಾವಣೆ ಬಂದಾಗಲೇ ಈ ಎಲ್ಲ ಅಕ್ರಮ ಕಂಡವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗುರು ಪಾಟೀಲ, ಈ ಕುರಿತು ಅನೇಕ ದಿನಗಳಿಂದ ದಾಖಲೆ ಸಂಗ್ರಹಿಸಲು ಪ್ರಯತ್ನ ನಡೆದಿತ್ತು. ಅಧಿಕಾರಿಗಳೂ ಅಕ್ರಮದಲ್ಲಿ ಶಾಮೀಲಾಗಿರುವುದರಿಂದ ದಾಖಲೆಗಳನ್ನು ಶೀಘ್ರದಲ್ಲಿ ನೀಡಲಿಲ್ಲ. ತಾವು ಈ ಹಿಂದೆ ಬಿಜೆಪಿಯಲ್ಲಿದ್ದು ಈಗ ಯಾವುದೇ ಪಕ್ಷಕ್ಕೆ ಸೇರಿಲ್ಲ. ಪುರಸಭೆಯ ಎಲ್ಲ 23 ವಾರ್ಡುಗಳಿಗೆ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. 15ಕ್ಕೂ ಹೆಚ್ಚು ವಾರ್ಡುಗಳಲ್ಲಿ ತಮ್ಮ ಬೆಂಬಲಿಗರು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ ಮಾತನಾಡಿ, ಮಾಜಿ ಶಾಸಕ ಶಿವಶೇಖರಪ್ಪಗೌಡ ಶಿರವಾಳ ಅವರ ನಿಧನದ ನಂತರ ಗುರು ಪಾಟೀಲ ಅವರ ನಾಯಕತ್ವ ಅನಿವಾರ್ಯವಾಗಿತ್ತು. ಸ್ಥಳೀಯ ಸಂಸ್ಥೆ ಚುನಾವಣೆ ಬಳಿಕ ಜನರ ಸಲಹೆ ಪಡೆದು ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎನ್ನುವುದನ್ನು ತೀರ್ಮಾನಿಸಲಾಗುವುದು ಎಂದು ಹೇಳಿದರು.