ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆರೋಗ್ಯಕ್ಕೆ ಆಯುರ್ವೇದ ಚಿಕಿತ್ಸೆ ಮದ್ದು

Lingaraj Badiger
Updated On : 5 Mar 2013, 10:57 am

ಯಾದಗಿರಿ: ಮೂರು ಸಾವಿರ ವರ್ಷಗಳ ಹಿಂದಿನಿಂದ ಬಂದಿರುವ ಆಯುರ್ವೇದ ಚಿಕಿತ್ಸೆ ಸಾಮಾನ್ಯ ಜನರ ಆರೋಗ್ಯಕ್ಕೆ ವರದಾನವಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ವಂದನಾ ಗಾಳಿ ಹೇಳಿದರು.
ತಾಲೂಕಿನ ಹತ್ತಿಕುಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಪಂ ಹಾಗೂ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹತ್ತಿಕುಣಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಧಿಶೂಲ ರೋಗಕ್ಕೆ ಉಚಿತ ಆಯುರ್ವೇದಿಕ್ ಚಿಕಿತ್ಸಾ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲಾಖೆ ಸರ್ಕಾರದ ಯೋಜನೆಗಳ ಕುರಿತು ಜನರಲ್ಲಿ ಪರಿಣಾಮಕಾರಿ ಜಾಗೃತಿ ಮೂಡಿಸಿ ಚಿಕಿತ್ಸೆ ಶಿಬಿರಗಳು ಹಾಗೂ ಯೋಗ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಜನತೆ ಇದರ ಲಾಭ ಪಡೆದುಕೊಂಡು ಆರೋಗ್ಯಕರ ಜೀವನ ನಡೆಸಬೇಕೆಂದು ಕರೆ ನೀಡಿದರು.
ಪಂಚಕರ್ಮ ಚಿಕಿತ್ಸೆಗೆ ಜಾಗದ ಅಭಾವ: ಸಂಧಿಶೂಲ ರೋಗ ಪ್ರಸಕ್ತ ದಿನಗಳಲ್ಲಿ ಎಲ್ಲರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಅದಕ್ಕೆ ಪ್ರಮುಖ ಕಾರಣ ಆಹಾರ ಪದ್ಧತಿ, ಪರಿಸರ ಮಾಲಿನ್ಯವಾಗಿದೆ. ಶಿಬಿರದಲ್ಲಿ ವೈದ್ಯರು ಸೂಚಿಸುವ ಔಷಧಿಗಳನ್ನು ತೆಗೆದುಕೊಂಡು ರೋಗ ತಡೆಗಟ್ಟಬಹುದು. ಪಂಚಕರ್ಮ ಚಿಕಿತ್ಸೆ ನೀಡಲು ಎಲ್ಲ ಕಡೆ ಸ್ಥಳದ ಅಭಾವ ಎದುರಾಗುತ್ತಿದೆ. ಸೂಕ್ತ ಸ್ಥಳ ನೀಡಿದರೆ ಚಿಕಿತ್ಸೆ ಜೊತೆಗೆ ಗಿಡಮೂಲಿಕೆಗಳ ವನ ಬೆಳೆಸಲು ಇಲಾಖೆ ಮುಂದಾಗುತ್ತದೆ ಎಂದು ಹೇಳಿದರು.
ಉಪನ್ಯಾಸಕ ಪಾಂಡು ರಾಠೋಡ ಮಾತನಾಡಿ, ಗ್ರಾಮೀಣ ಜನತೆ ಕಡಿಮೆ ಖರ್ಚಿನ ಆಯುರ್ವೇದ ಗಿಡಮೂಲಿಕೆಗಳ ಔಷಧಿ ಬಳಸಿಕೊಳ್ಳುವದರ ಜೊತೆಗೆ ನಮ್ಮ ಮನೆಯಲ್ಲಿ ಸರಿಯಾದ ಆಹಾರ ಪದ್ಧತಿ ಅನುಸರಿಸುವುದು ಅಗತ್ಯ. ಯೋಗಾಸನದ ವಿವಿಧ ಆಸನಗಳನ್ನು ರೂಢಿಸಿಕೊಂಡಲ್ಲಿ ಉತ್ತಮ ಆರೋಗ್ಯ ಹೊಂದಬಹುದು ಎಂದರು.
ಶಿಬಿರವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಪಿ. ಹೊಸಟ್ಟಿ ಉದ್ಘಾಟಿಸಿದರು. ಡಾ. ಎ.ಡಿ. ಗಂಗನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಆಯುರ್ವೇದ ಚಿಕಿತ್ಸೆಯ ಸಾಧಕ ಬಾಧಕಗಳನ್ನು ವಿವರಿಸಿದರು.  ವೇದಿಕೆ ಮೇಲೆ ವೈದ್ಯರಾದ ಡಾ. ರಮೇಶ ಸಜ್ಜನ್, ಡಾ. ಬಸವರಾಜ, ಡಾ. ಸುನಂದಾ ಎ.ಕುದರಿ, ಸುಶೀಲಾಬಾಯಿ ಇತರರಿದ್ದರು.
ಡಾ. ಪ್ರಮೋದ ಕುಲಕರ್ಣಿ, ಡಾ. ಪ್ರಕಾಶ ರಾಜಪುರ, ಡಾ. ರಾಮರೆಡ್ಡಿ, ಡಾ. ಸತೀಶ ಜಮಾದಾರ ವೈದ್ಯರ ತಂಡ ನೂರಾರು ರೋಗಿಗಳ ಸಂಧಿಶೂಲ ತಪಾಸಣೆ ಕೈಗೊಂಡು ಅಗತ್ಯ ಸಲಹೆ ಸೂಚನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement