ಯುವ ವಕೀಲನ ಮೇಲೆ ಗುಂಡಿನ ದಾಳಿ
ಸುರಪುರ: ಇಲ್ಲಿನ ಯುವ ವಕೀಲ ಮಂಜುನಾಥ ಹುದ್ದಾರ್ ಮೇಲೆ ಭಾನುವಾರ ಸಂಜೆ ಅನಾಮಧೇಯ ಯುವಕರು ಗುಂಡಿನ ದಾಳಿ ಮಾಡಿದ ಘಟನೆ ವರದಿಯಾಗಿದೆ.
ವಕೀಲ ಮಂಜುನಾಥ ಹುದ್ದಾರ್ ತನ್ನ ಮಕ್ಕಳೊಂದಿಗೆ ಬೈಕ್ ಮೇಲೆ ಗಾಂಧಿ ವೃತ್ತದಿಂದ ಭಾನುವಾರ ಸಂಜೆ 7.45 ಗಂಟೆ ಸುಮಾರಿಗೆ ತಮ್ಮ ನಿವಾಸಕ್ಕೆ ತೆರಳುತ್ತಿದ್ದರು. ತಹಸೀಲ್ದಾರ್ ಕಚೇರಿ ರಸ್ತೆಯ ಬಡಿಗೇರ್ ಬಾವಿಯ ಹತ್ತಿರದಲ್ಲಿ ಹೋಗುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ವೈಟ್ ಮೆಟಾಲಿಕ್ ಬಣ್ಣದ ಬೈಕ್ ಮೇಲೆ ಹಿಂದಿನಿಂದ ಬಂದ ಇಬ್ಬರು ಯುವಕರು ರಿವಾಲ್ವರ್‌ನಿಂದ ವಕೀಲನ ಮೇಲೆ ಗುಂಡು ಹಾರಿಸಿದರು. ಆದರೆ ಅದೃಷ್ಟವಶಾತ್ ವಕೀಲರಿಗೆ ಗುಂಡು ತಾಗದೆ ಬಚಾವಾದರು. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಪಾರಿ ಶಂಕೆ: ಕಳೆದ ಎರಡು ವರ್ಷಗಳ ಹಿಂದೆ ನನ್ನ ಚಿಕ್ಕಪ್ಪ ಆನಂದ ಸಾಹುಕಾರ್ ಹುದ್ದಾರ್ ಕೊಲೆ ಆಗಿತ್ತು. ಆ ಪ್ರಕರಣದಲ್ಲಿ ಸಾಕ್ಷಿದಾರರಾಗಿದ್ದ ನನಗೂ ಮತ್ತು ನನ್ನ ತಂದೆಗೂ ಕಳೆದ ಕೆಲ ದಿನಗಳಿಂದ ಅನಾಮಧೇಯ ವ್ಯಕ್ತಿಗಳು ದೂರವಾಣಿ ಮೂಲಕ ಕೊಲೆ ಬೆದರಿಕೆ ಒಡ್ಡುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಠಾಣೆಗೆ ದೂರು ಕೂಡಾ ಸಲ್ಲಿಸಿದ್ದೇನೆ. ದಿ. 4ರಂದು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನನ್ನ ಚಿಕ್ಕಪ್ಪನ ಕೊಲೆ ಪ್ರಕರಣದ ಸಾಕ್ಷಿ ಹೇಳಿಕೆ ಇತ್ತು. ಈ ಹಿನ್ನೆಲೆಯಲ್ಲಿ ಸುಪಾರಿ ನೀಡಿ ನನ್ನನ್ನು ಕೊಲೆ ಮಾಡಲು ಸಂಚು ರೂಪಿಸಿರಬಹುದೆಂದು ವಕೀಲ ಮಂಜುನಾಥ ಹುದ್ದಾರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆತಂಕ: ವಕೀಲ ಮಂಜುನಾಥ ಹುದ್ದಾರ್ ಮೇಲೆ ಗುಂಡಿನ ದಾಳಿ ಯತ್ನ ನಡೆದಿದೆ ಎಂಬ ಸುದ್ದಿ ತಾಲೂಕಿನಾದ್ಯಂತ ಆತಂಕ ಸೃಷ್ಟಿಸಿದೆ. ಘಟನೆ ತಿಳಿಯುತ್ತಿದ್ದಂತೆ ವಕೀಲ ಸಮೂಹ, ಅವರ ಆಪ್ತರು, ಸಂಬಂಧಿಕರು ಅವರ ನಿವಾಸಕ್ಕೆ ತೆರಳಿ ವಿಚಾರಿಸಿದರು. ದಾಳಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆತಂಕ ಮನೆ ಮಾಡಿದೆ.
ಎಸ್ಪಿ ಭೇಟಿ: ದಾಳಿ ಯತ್ನ ಹಿನ್ನೆಲೆಯಲ್ಲಿ ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಘಟನಾ ಸ್ಥಳಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ತನಿಖೆ ಕೈಗೊಂಡು ಪ್ರಕರಣ ಪತ್ತೆ ಹಚ್ಚುವುದಾಗಿ ತಿಳಿಸಿದರು.
ಡಿವೈಎಸ್ಪಿ ಎಸ್.ಡಿ. ಕಟ್ಟಿಮನಿ, ಪಿಐ ರಾಜಕುಮಾರ ವಾಜಂತ್ರಿ, ಪಿಎಸ್‌ಐ ಹಣಮಂತಪ್ಪ ಪಟ್ಟೇದಾರ್ ಇದ್ದರು.