ವಿವಿಧ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ
ಗುಲ್ಬರ್ಗ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ಶರಣ ಬಸವೇಶ್ವರ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಚಿತ್ರಕಲಾ ಸ್ಪರ್ಧೆಯಲ್ಲಿ 4ನೇ ತರಗತಿ ವಿದ್ಯಾರ್ಥಿನಿ ಕೃಪಾ ಆರ್.ಸಿ. ಪ್ರಥಮ, ಭಾಷಣ ಸ್ಪರ್ಧೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಅಭಿಷೇಕ ಜಿ.ಕೆ ದ್ವಿತೀಯ, 9ನೇ ತರಗತಿ ವಿದ್ಯಾರ್ಥಿ ಪವನಕುಮಾರ ವಿಶೇಷ, ರಸಪ್ರಶ್ನೆ ಸ್ಪರ್ಧೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಸಂಕೇತ ಮುತ್ತಿನ ದ್ವಿತೀಯ, ಸಿದ್ದಾರ್ಥ ಪಾಟೀಲ್ ದ್ವಿತೀಯ ಸ್ಥಾನದಲ್ಲಿ ವಿಜೇತರಾಗಿದ್ದಾರೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಡಾ. ಶರಣಬಸವಪ್ಪ ಅಪ್ಪ ಹಾಗೂ ಪ್ರಾಚಾರ್ಯರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾಲಯದಲ್ಲಿ ಉಪನ್ಯಾಸ
ಗುಲ್ಬರ್ಗ: ನಗರದ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದ ರೆಮಿಡಿಯಲ್ ಕೋಚಿಂಗ್ ಕ್ಲಾಸ್‌ನಲ್ಲಿ ಗುಲ್ಬರ್ಗ ಕಾನೂನು ಸ್ನಾತಕೋತ್ತರ ವಿಭಾಗದ ಪ್ರೊ. ಜೆ.ಎಸ್. ಪಾಟೀಲ್ ನ್ಯಾಯಶಾಸ್ತ್ರದ ಬೆಳವಣಿಗೆ ವಿಷಯದ ಮೇಲೆ ಉಪನ್ಯಾಸ ನೀಡಿದರು. ಕಾನೂನು ಯಾವ ರೀತಿಯಾಗಿ ಸಮಾಜದಲ್ಲಿ ಬೆಳವಣಿಗೆಯಾಯಿತು. ನಮ್ಮ ಸಮಾಜ ಸಂಕಿರಣತೆಯಿಂದ ಕೂಡಿದ ಸಮಾಜ ಎಂದು ವಿವರಿಸಿ ಇಂದಿನ ಸಂಕಿರ್ಣ ಸಮಾಜಕ್ಕೆ ಹೊಸ ಕಾನೂನು ರಚನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಹಾಶಿವರಾತ್ರಿ; 9ರಂದು ಪ್ರವಚನ
ಗುಲ್ಬರ್ಗ: ನಗರದ ಮಹಾತ್ಮ ಬಸವೇಶ್ವರ ಹೊಸ ಬಡಾವಣೆಯಲ್ಲಿರುವ ಶಿವಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ನಿಮಿತ್ತ ಮಾ. 9ರಂದು ಸಾಯಂಕಾಲ 7ಕ್ಕೆ ಸೇಡಂ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮಿಗಳಿಂದ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.10ರಂದು ಶಿವದರ್ಶನ ಕಾರ್ಯಕ್ರಮ ಆಚರಿಸಲಾಗುವುದು. ರಾತ್ರಿ ಶಿವಮಂದಿರದಲ್ಲಿ ನುರಿತ ಆಕಾಶವಾಣಿ ಕಲಾವಿದರಿಂದ ಭಜನೆ, ಮಾ.11ರಂದು ಬೆ. 8ರಿಂದ 10ರವರೆಗೆ ಕುಂಭಾಭಿಷೇಕ ನಂತರ ಮಹಾಪ್ರಸಾದ ಇರುವುದು. ಬಸವೇಶ್ವರ ಕಾಲೋನಿ, ಹೊಸ ಬಡಾವಣೆ, ಆದರ್ಶ ಕಾಲೋನಿ, ಗುಬ್ಬಿ ಕಾಲೋನಿ, ಪ್ರಗತಿ ಕಾಲೋನಿ ಅಲ್ಲದೆ ನಗರದ ಎಲ್ಲಾ ಕಡೆಗಳಿಂದಲೂ ಸಹಸ್ರಾರು ಭಕ್ತರು ಬಂದು ಶಿವದರ್ಶನ ಪಡೆಯಲು ಕೋರಲಾಗಿದೆ.
ವಿಜ್ಞಾನ ದಿನಾಚರಣೆ
ಗುಲ್ಬರ್ಗ: ಶರಣ ಬಸವೇಶ್ವರ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು. ಕಾಲೇಜಿನ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಬಿ.ಕೆ ಚಳಕೇರಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಸರ್ ಸಿ.ವಿ. ರಾಮನ್ ಅವರ ಸಮಗ್ರ ಜೀವನ ಚರಿತ್ರೆ ಹಾಗೂ ಅವರ ಸಾಧನೆಗಳ ಬಗ್ಗೆ ತಿಳಿಸಿದರು. ಪ್ರೊ. ಚಳಗೇರಿ, ಪ್ರಾಚಾರ್ಯ ಎನ್.ಎಸ್. ದೇವರಕಲ್ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಮಾಡಿದರು.