45ವಿದ್ಯುನ್ಮಾನ ಯಂತ್ರಗಳ ಬಳಕೆ
ಸುರಪುರ: ಇಲ್ಲಿಯ 27 ವಾರ್ಡುಗಳ ಚುನಾವಣೆಗೆ 45 ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮಾಡಲಾಗುತ್ತಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಸಜ್ಜುಗೊಳಿಸುವ ಕಾರ್ಯ ಪೂರ್ಣಗೊಂಡಿದೆ ಎಂದು ಚುನಾವಣಾ ಮೂಲಗಳು ತಿಳಿಸಿವೆ.
ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಮತಯಂತ್ರಗಳಿಗೆ ಆಯಾ ವಾರ್ಡುಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರುಗಳುಳ್ಳ ಪತ್ರವನ್ನು ಲಗತ್ತಿಸುವ ಕಾರ್ಯ ಜರುಗಿತು. ಆಯಾ ವಾರ್ಡಿನಲ್ಲಿರುವ ಮತಗಟ್ಟೆಗಳಿಗೆ ಸರಿಸಮನಾಗಿ ಮತ ಯಂತ್ರಗಳಿಗೆ ಅಭ್ಯರ್ಥಿಗಳ ಕ್ರಮ ಸಂಖ್ಯೆ, ಹೆಸರು, ಚಿಹ್ನೆ ಮತ್ತು ಚಿಹ್ನೆಯ ಮುಂದೆ ಮತಚಲಾಯಿಸಲು ಅಗತ್ಯವಿರುವ ಬಟನ್ಗಳನ್ನು ತೆರೆದು, ಮತಯಂತ್ರದ ಉಳಿದೆಲ್ಲ ಬಟನ್ಗಳನ್ನು ಮುಚ್ಚುವ ಮೂಲಕ ಸಜ್ಜುಗೊಳಿಸಲಾಯಿತು. ನಾನಾ ಪಕ್ಷಗಳ ಮುಖಂಡರು ಹಾಜರಿದ್ದು, ಮತಪತ್ರದಲ್ಲಿ ತಮ್ಮ ಹೆಸರು, ಚಿಹ್ನೆ, ಕ್ರಮ ಸಂಖ್ಯೆ ಸಮರ್ಪಕವಾಗಿದೆಯೇ ಎನ್ನುವುದನ್ನು ದೃಢಪಡಿಸಿಕೊಂಡರು. ಪಟ್ಟಣದಲ್ಲಿ 27 ವಾರ್ಡ್ಗಳಿದ್ದು 45 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 45 ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಯಂತ್ರಗಳು ಸಿದ್ಧಪಡಿಸಲಾಗಿದೆ. ಹೆಚ್ಚುವರಿಯಾಗಿ 8 ಮತಯಂತ್ರಗಳಿವೆ. 30 ಸಾಮಾನ್ಯ, 5 ಸೂಕ್ಷ್ಮ ಹಾಗೂ 10 ಅತೀ ಸೂಕ್ಷ್ಮ ಮತಗಟ್ಟೆಗಳಾಗಿವೆ ಎಂದು ಚುನಾವಣಾ ಶಾಖೆ ತಿಳಿಸಿವೆ.
ಕಚೇರಿ, ಶಾಲಾ- ಕಾಲೇಜುಗಳಿಗೆ ರಜೆ
ಯಾದಗಿರಿ: ಮಾ.7ರಂದು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಯಾದಗಿರಿ ನಗರಸಭೆ, ಶಹಾಪುರ, ಸುರಪುರ ಪುರಸಭೆ ಹಾಗೂ ಗುರುಮಠಕಲ್ ಪಟ್ಟಣ ಪಂಚಾಯಿತಿಗಳಿಗೆ ನಡೆಯಲಿರುವ ಚುನಾವಣೆ ಸಂದರ್ಭದಲ್ಲಿ ಮತದಾರರು ಮತಚಲಾಯಿಸಲು ಅನುಕೂಲವಾಗುವಂತೆ ಆಯಾ ಮತಕ್ಷೇತ್ರಗಳ ಎಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ- ಕಾಲೇಜುಗಳಿಗೆ ಸಾರ್ವತ್ರಿಕ ರಜೆಯನ್ನು ಸರ್ಕಾರ ಘೋಷಿಸಿದೆ.
ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಈ ಚುನಾವಣಾ ಕಾಂರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲ ಸರ್ಕಾರಿ ನೌಕರರು ಚುನಾವಣೆ ಕಾರ್ಯಕ್ಕೆ ಹಾಜರಾಗಬೇಕು. ಈ ಕ್ಷೇತ್ರಗಳಲ್ಲಿ ಮತದಾನ ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಮತದಾನ ನಡೆಯುವ ಮತಗಟ್ಟೆಯನ್ನು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಸ್ಥಾಪಿಸಿದ್ದಲ್ಲಿ ಅಂತಹ ಕಚೇರಿ ಹಾಗೂ ಶಾಲೆಗಳಿಗೆ ಮಾ.6ರಂದು ಹಾಗೂ ಮತಎಣಿಕೆ ನಡೆಯುವ ದಿನಾಂಕದಂದು ಮತಎಣಿಕೆ ನಡೆಯುವ ಕೇಂದ್ರಗಳಲ್ಲಿ ಮಾತ್ರ ರಜೆ ಘೋಷಿಸುವ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಯುಧ ಠೇವಣಿ ಮಾಡಿಕೊಳ್ಳಲು ಆದೇಶ
ಯಾದಗಿರಿ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯಿತಿಗಳಿಗೆ ನಡೆಯಲಿರುವ ಚುನಾವಣೆ ಶಾಂತಿಯುತವಾಗಿ, ಮುಕ್ತವಾಗಿ ಹಾಗೂ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತೆ ಕ್ರಮವಾಗಿ ಸಾರ್ವಜನಿಕರು ಹೊಂದಿರುವ ಶಸ್ತ್ರಾಸ್ತ್ರ, ಆಯುಧಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಸೂಚಿಸಿದ್ದಾರೆ.
ಈ ಆದೇಶವು ಮಾ. 6ರಿಂದ ಮಾ.12ರವರೆಗೆ ಜಾರಿಯಲ್ಲಿರಲಿದ್ದು, ಈ ದಿನಗಳಂದು ಯಾವುದೇ ಆಯುಧ ಲೈಸನ್ಸ್ದಾರರು ತಮ್ಮ ಆಯುಧವನ್ನು ಸಾರ್ವಜನಿಕ ಸ್ಥಳದಲ್ಲಿ ಹೊತ್ತೊಯ್ಯುವುದನ್ನು ಮತ್ತು ಪ್ರದರ್ಶನ ಮಾಡುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಚುನಾವಣೆ, ಮದ್ಯ ಮಾರಾಟ ನಿಷೇಧ
ಯಾದಗಿರಿ: ಮಾ.7ರಂದು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ಅನುಕೂಲವಾಗುವಂತೆ ಮಾ.7ರಂದು ಬೆ.7 ಗಂಟೆಯಿಂದ ಮಧ್ಯರಾತ್ರಿಯವರೆಗೆ ಮತ್ತು ಮತಎಣಿಕೆ ದಿನವಾದ ಮಾ.11ರಂದು ಬೆ.6ರಿಂದ ರಾತ್ರಿ 8ರವರೆಗೆ ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಹಾಗೂ ನಗರ ಸ್ಥಳೀಯ ಗಡಿಯ ಪ್ರದೇಶದಿಂದ 3 ಕಿಮೀ ಪರಿಧಿಯಲ್ಲಿ ಮದ್ಯಪಾನ ಹಾಗೂ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಆದೇಶ ಹೊರಡಿಸಿದ್ದಾರೆ. ಪ್ರದೇಶದಲ್ಲಿನ ವೈನ್ಶಾಪ್, ಬಾರ್ಗಳು, ಸಗಟು ಮತ್ತು ಚಿಲ್ಲರೆ ಮದ್ಯಮಾರಾಟ ನಿಷೇಧಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.