ಈಗೇನಿದ್ದರೂ ಸದ್ದು ಗದ್ದಲವಿಲ್ಲದ ಓಲೈಕೆ
ಯಾದಗಿರಿ: ನಗರ, ಸ್ಥಳೀಯ ಸಂಸ್ಥೆ ಚುನಾವಣೆಯ ಬಹಿರಂಗ ಪ್ರಚಾರ ಕಾರ್ಯ ಮಂಗಳವಾರ ಬೆಳಗ್ಗೆಯೇ ಮುಗಿದ ಹಿನ್ನೆಲೆಯಲ್ಲಿ ಈಗ ಅಂತರಂಗದ ಪ್ರಚಾರದ್ದೇ ಸದ್ದು. ಗಲಾಟೆ, ಘೋಷಣೆ ಇಲ್ಲದೇ ಮನೆಮನೆಗೆ ಹೋಗಿ ಮತ ಚೀಟಿ ನೀಡಿ ಕೊನೆ ಕ್ಷಣದ ಕಸರತ್ತಿನಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕಾರ್ಯನಿರತರಾಗಿದ್ದಾರೆ.
ಮತದಾನಕ್ಕೆ ಒಂದೇ ದಿನ ಬಾಕಿ ಇರುವುದರಿಂದ ಈಗ ಸದ್ದಿಲ್ಲದೇ ಪ್ರಚಾರ ನಡೆಯುತ್ತಿದೆ. ಗುಂಪಾಗಿ ಪ್ರಚಾರ ನಡೆಸಿದವರು ಈಗ ಪ್ರತ್ಯೇಕವಾಗಿ ಮತದಾರರನ್ನು ಭೇಟಿಯಾಗಿ ಮಾತನಾಡಿಸುತ್ತಿದ್ದಾರೆ. ಮತದಾರರ ಹೆಸರು, ಸಂಖ್ಯೆ, ಯಾವ ಮತಗಟ್ಟೆ ವ್ಯಾಪ್ತಿಗೆ ಸೇರುತ್ತಾರೆ ಎಂಬ ಮಾಹಿತಿಯುಳ್ಳ ಮತದಾರರ ಚೀಟಿಯನ್ನು ವಿತರಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ.
ಜತೆಗೆ ಕೊನೆ ಕ್ಷಣದ ಕಸರತ್ತಿನ ಭಾಗವಾಗಿ ಮತದಾರರಿಗೆ ಆಮಿಷ ಒಡ್ಡುವ ಕಾರ್ಯವೂ ಎಗ್ಗಿಲ್ಲದೇ ನಡೆದಿದೆ. ಮದ್ಯಾರಾಧನೆಯೂ ಜೋರಾಗಿಯೇ ನಡೆದಿದ್ದು, ಹೇಗಾದರೂ ಮಾಡಿ ಮತದಾರರನ್ನು ಸೆಳೆಯುವ ಪ್ರಯತ್ನ ಮುಂದುವರಿದಿದೆ.
ಗುಳೆ ಹೋದವರ ಅರಸಿ: ಮಳೆಯಿಲ್ಲದೇ ಇಲ್ಲಿ ಕೃಷಿ ಮಾಡಲಾಗದೇ, ಕುಡಿಯಲು ನೀರಿಲ್ಲದೇ, ಮಾಡಲು ಕೆಲಸವಿಲ್ಲದೇ ಮಹಾನಗರಗಳಿಗೆ ಗುಳೆ ಹೋದ ನಗರ ಪ್ರದೇಶದ ಕಾರ್ಮಿಕರು ಈಗ ಜನಪ್ರತಿನಿಧಿಗಳಿಗೆ ನೆನಪಾಗುತ್ತಿದ್ದಾರೆ. ಗುಳೆ ಹೋದ ಕುಟುಂಬಗಳನ್ನು ಅರಸಿ ಅಭ್ಯರ್ಥಿಗಳ ಪರವಾಗಿ ವಾಹನಗಳು ಹೋಗಿವೆ.
ಈಗಾಗಲೇ ಈ ರೀತಿಯಾಗಿ ಬೆಂಗಳೂರು, ಹೈದರಾಬಾದ್, ಪುಣೆ, ಮುಂಬೈ ಇತ್ಯಾದಿ ನಗರಗಳಿಗೆ ಕಾರ್ಯಕರ್ತರು ತೆರಳಿದ್ದಾರೆ. ಅಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಕಾರ್ಮಿಕರನ್ನು ಓಲೈಸಿ ಕರೆತರುವ ಪ್ರಯತ್ನ ನಡೆದಿದೆ. ಬಂದು ಹೋಗುವ ಖರ್ಚು ಹಾಗೂ ಮೇಲಿಂದ ಮತ್ತೊಂದಷ್ಟು ಹಣ ನೀಡಿ ಅವರನ್ನು ಕುಟುಂಬ ಸಮೇತರಾಗಿ ಕರೆತರಲಾಗುತ್ತಿದೆ.
ಜಿಲ್ಲೆಯಿಂದ ಗುಳೆ ಹೋದವರ ಸಂಖ್ಯೆ ಜಾಸ್ತಿಯಿದ್ದು, ಈಗ ಮತದಾನದ ಸಮಯದಲ್ಲಿ ಅವರ ಅನಿವಾರ್ಯತೆ ಗೊತ್ತಾಗುತ್ತಿದೆ. ಆದ್ದರಿಂದ ರೈಲು, ಬಸ್, ಖಾಸಗಿ ವಾಹನಗಳ ಮೂಲಕ ಜಿಲ್ಲೆಯ ಕಾರ್ಮಿಕರು ಪುಕ್ಕಟೆಯಾಗಿ ಹುಟ್ಟೂರಿಗೆ ಕಾಲಿಡುತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಗುಳೆ ಹೋದವರಿಗೆ ಹುಟ್ಟೂರು ಕಾಣುವ ಭಾಗ್ಯವನ್ನು ಕರುಣಿಸಿದೆ.
ಬತ್ತದ ಉತ್ಸಾಹ: ಸುಡು ಬಿಸಿಲನ್ನೂ ಲೆಕ್ಕಿಸದೇ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತದಾರರನ್ನು ಓಲೈಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಿಸಿಲಿನಿಂದ ಬಸವಳಿದರೂ ಅವರಲ್ಲಿ ಉತ್ಸಾಹ ಮಾತ್ರ ಬತ್ತುತ್ತಿಲ್ಲ. ಜಾತಿವಾರು ಅಂಕಿ ಅಂಶಗಳತ್ತ ಚಿತ್ತ ನೆಟ್ಟು, ಖಾತ್ರಿ ಓಟುಗಳ ಲೆಕ್ಕಚಾರ ಹಾಕುತ್ತಿದ್ದಾರೆ.
ಚುನಾವಣೆಯನ್ನು ಪ್ರತಿಯೊಬ್ಬರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆಯಾ ವಾರ್ಡಿನಲ್ಲಿ ತಮ್ಮ ಜಾತಿಗೆ ಸೇರಿದ ಮತದಾರರೆಷ್ಟು, ಎಷ್ಟು ಮತ ಬೀಳಬಹುದು, ಎಷ್ಟು ಬಿದ್ದರೆ ಗೆಲವು ಗ್ಯಾರಂಟಿ ಇತ್ಯಾದಿ ಲೆಕ್ಕಾಚಾರ ಹಾಕಿ ಆ ಮತ ಗಳಿಸಿಕೊಳ್ಳಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಮುಖ್ಯವಾಗಿ ಬಡ ಮತದಾರನಿಗೆ ಹಣದ ಆಮಿಷ, ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಮತವನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದಾರೆ.
ಕೊನೆ ಕ್ಷಣದ ಕಸರತ್ತು ನಡೆಸಲು ಬುಧವಾರ ಒಂದೇ ದಿನ ಬಾಕಿ ಇದ್ದು, ಮಾ.7ರಂದು ಬೆ.7ರಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಚುನಾವಣಾ ಅಕ್ರಮ ನಡೆಯದಂತೆ ಜಿಲ್ಲಾಡಳಿತ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಶಾಂತಿಯುತ ಮತದಾನಕ್ಕೆ ಅದು ಸಜ್ಜಾಗಿದೆ.