ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಾಲಕಿಯರ ಮಾರಾಟ ತಡೆಗೆ ಮುದ್ನಾಳ ಆಗ್ರಹ

Lingaraj Badiger
Updated On : 6 Mar 2013, 11:15 am

ಯಾದಗಿರಿ: ಬಡ ಕುಟುಂಬದ ಅಪ್ರಾಪ್ತ ಬಾಲಕಿಯರನ್ನು ಮದುವೆ ನೆಪದಲ್ಲಿ ಪರ ರಾಜ್ಯಗಳಿಗೆ ಮಾರಾಟ ಮಾಡುವ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ತಡೆ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ. ಮಹಿಳೆ ಮತ್ತು ಪುರುಷ ಮಧ್ಯವರ್ತಿಗಳು ತಮ್ಮ ಈ ಅಕ್ರಮಕ್ಕೆ ಬಡ ಕುಟುಂಬಗಳೇ ಗುರಿಯಾಗುತ್ತಿವೆ. ಬಡ ಕುಟುಂಬಗಳಲ್ಲಿನ ಅಪ್ರಾಪ್ತ ಬಾಲಕಿಯರನ್ನು, ತಂದೆ ಅಥವಾ ತಾಯಿ ಇಲ್ಲದ ಬಾಲಕಿಯರನ್ನು ಗುರುತಿಸಿ ಪರ ರಾಜ್ಯದ ಪುರುಷರಿಗೆ ಅವರದೇ ಸಮಾಜದವರು ಎಂದು ನಂಬಿಸಿ ಮೋಸ ಮಾಡುತ್ತಿದ್ದಾರೆ. ಬಾಲಕಿ ಯಾವ ಜಾತಿಯವಳೋ ಅದೇ ಜಾತಿಯ ಪುರುಷ ಎಂದು ಹೇಳಿ ವಂಚಿಸುತ್ತಿರುವ ಪ್ರಕರಣ ಹೆಚ್ಚಾಗಿದೆ. ಉತ್ತಮ ಸಂಬಳ, ಯೋಗ್ಯ ವರ ಎಂದು ನಂಬಿಸಿ ಹಣದ ಆಮಿಷ ಒಡ್ಡುತ್ತಿದ್ದಾರೆ. ನಂತರ ಮದುವೆ ನೆಪದಲ್ಲಿ ಬಾಲಕಿಯನ್ನು ಬೇರೆ ರಾಜ್ಯಕ್ಕೆ ಕಳುಹಿಸಿ ವೇಶ್ಯಾವಾಟಿಕೆಗೆ ತಳ್ಳುವ ವ್ಯವಸ್ಥಿತ ಜಾಲ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೋಸದಿಂದ ಮದುವೆ: ಇದೇ ರೀತಿ ಹಣದ ಆಮಿಷವೊಡ್ಡಿ ಬಾಲಕಿಯನ್ನು ಮದುವೆ ಮಾಡುವ ಪ್ರಯತ್ನ ನಡೆದಾಗ ನಮ್ಮ ಸಮಾಜದ ಮುಖಂಡರಿಗೆ ಸಂಶಯ ಬಂತು. ಕೂಲಂಕಷವಾಗಿ ಪರಿಶೀಲಿಸಿದಾಗ ಮೋಸದಿಂದ ಮದುವೆ ಮಾಡುತ್ತಿರುವುದು ಬಹಿರಂಗವಾಗಿದೆ. ಇದೇ ರೀತಿ ಅನೇಕ ಪ್ರಕರಣಗಳು ಗೊತ್ತಾಗದೇ ಉಳಿದಿವೆ. ಮಧ್ಯವರ್ತಿಗಳಿಂದಾಗಿ ಅಪ್ರಾಪ್ತ ಬಾಲಕಿಯರ ಬಾಳು ಹಾಳಾಗುತ್ತಿದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ತಡೆಯುವಂತೆ ಸೂಚಿಸಬೇಕು. ಅಪ್ರಾಪ್ತ ಬಾಲಕಿಯರ ಮಾರಾಟ ಜಾಲದಲ್ಲಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಉಮೇಶ ಮುದ್ನಾಳ, ಹಂಪಯ್ಯ ಚಾಮನಳ್ಳಿ, ಸಾಬಣ್ಣ ಚಾಮನಳ್ಳಿ, ಯಲ್ಪಪ್ಪ ಹೊಂಟೂರ, ಮಲ್ಲಿಕಾರ್ಜುನ ಬೋಯಿವಾಡಾ ಇತರರು ಇದ್ದರು.
ನಾಲವಾರ ಶ್ರೀಗೆ ತುನ್ನೂರ ಸನ್ಮಾನ
ಯಾದಗಿರಿ: ವೈಚಾರಿಕತೆ ಹಾಗೂ ಸಮಾಜ ಸುಧಾರಣೆಯಲ್ಲಿ ಶ್ರೇಷ್ಠತೆ ಮೆರೆದ ನಾಲವಾರದ ತೋಟೇಂದ್ರ ಸ್ವಾಮೀಜಿಗೆ ಈ ಬಾರಿ ಗುಲ್ಬರ್ಗ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದ್ದು ಅತ್ಯಂತ ಸಂತಸದ ಸಂಗತಿ. ಇದು ಸಮಾಜದ ಎಲ್ಲರಿಗೆ ಸಿಕ್ಕ ಗೌರವವಾಗಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು. ಮಂಗಳವಾರ ತಮ್ಮ ನಿವಾಸದಲ್ಲಿ ಶ್ರೀಗಳನ್ನು ಸತ್ಕರಿಸಿ, ಆಶೀರ್ವಾದ ಪಡೆದರು. ಸಮಾಜ ಸುಧಾರಣೆಯಲ್ಲಿ ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗುಲ್ಬರ್ಗ ವಿವಿಯು ನಾಲವಾರಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿರುವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಿದಂತಾಗಿದೆ ಎಂದರು. ಈ ಸಂದರ್ಭದಲ್ಲಿ ತನಾರತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಿದ್ದರಾಜ ರಡ್ಡಿ, ಬಾಪುಗೌಡ, ಮಲ್ಲೇಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement