ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸುರಪುರ ಕಂದಮ್ಮ ಸಜೀವ ದಹನ

Lingaraj Badiger
Updated On : 6 Mar 2013, 11:15 am

ಬೆಂಗಳೂರು: ಅಡುಗೆ ಮಾಡುತ್ತಿದ್ದ ವೇಳೆ ಸಂಭವಿಸಿದ ಅಗ್ನಿ ದುರಂತದಲ್ಲಿ ಎರಡು ವರ್ಷದ ಕಂದಮ್ಮ ಮೃತಪಟ್ಟ ಕರುಣಾಜನಕ ಘಟನೆ ಬಾಗಲೂರಿನ ಹೊಸಬಂಡೆ ಸಮೀಪದಲ್ಲಿ ಸಂಭವಿಸಿದೆ.
ಚೇತನ್ ಮೃತ ದುರ್ದೈವಿ. ಈತ ಯಾದಗಿರಿ ಸುರಪುರದ ಜಮಾಲ್‌ಪುರ ಮೂಲದ ಅಪ್ಪಣ್ಣ ಹಾಗೂ ಪುಷ್ಪವತಿ ದಂಪತಿಯ ಪುತ್ರ.
ಅಪ್ಪಣ್ಣ ಅವರ ಸಂಬಂಧಿ ಚಂದ್ರವ್ವ ಮಧ್ಯಾಹ್ನ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅಗ್ನಿ ಆವರಿಸಿ ಈ ದುರಂತ ಸಂಭವಿಸಿದೆ. ಈ ವೇಳೆ ಗುಡಿಸಲಿನಲ್ಲಿದ್ದ ಮೂವರು ಮಕ್ಕಳನ್ನು ಅಲ್ಲಿದ್ದ ವೃದ್ಧೆ ಚಂದ್ರವ್ವ(65) ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಇಲ್ಲಿನ ಸ್ಥಳೀಯರ ಪ್ರಕಾರ ಹೊಸಬಂಡೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಕೂಲಿಕಾರ್ಮಿಕರು ವಾಸಿಸುವ ಗುಡಿಸಲಿನಲ್ಲಿ ಇಟ್ಟಿದ್ದ ಸ್ಫೋಟಕ ಸಿಡಿದಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮಧ್ಯಾಹ್ನ ಅಪ್ಪಣ್ಣ ಹಾಗೂ ಪತ್ನಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಚೇತನ್ ಮಲಗಿದ್ದ. ಆತನ ಸಹೋದರಿ ಭಾಗ್ಯಶ್ರೀ ಹಾಗೂ ಅಪ್ಪಣ್ಣನ ಸಹೋದರನ ಮಕ್ಕಳಾದ ದಿಲೀಪ್‌ಕುಮಾರ್(9 ತಿಂಗಳು), ದಿವ್ಯ(2) ಮನೆಯಲ್ಲಿದ್ದರು.
ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಂಗಾಲಾದ ಚಂದ್ರವ್ವ ಉಳಿದ ಮೂವರನ್ನು ಹೊರಗೆ ಕರೆತರುವಷ್ಟರಲ್ಲಿ ಚೇತನ್ ಬೆಂಕಿಗಾಹುತಿಯಾಗಿದ್ದ. ಬೆಂಕಿ ಸುತ್ತಲಿನ 10 ಗುಡಿಸಲುಗಳಿಗೆ ವ್ಯಾಪಿಸಿದ್ದು, ಎಲ್ಲಾ ಗುಡಿಸಲುಗಳು ಮತ್ತು ಅಲ್ಲಿದ್ದ ಬೆಲೆಬಾಳುವ ವಸ್ತುಗಳು ಸುಟ್ಟುಹೋಗಿವೆ. ಸುದ್ದಿ ತಿಳಿದ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಕ್ರಮ ಗಣಿಗಾರಿಕೆ, ಸ್ಫೋಟ ಸಂಗ್ರಹದ ಬಗ್ಗೆ ಯಾವುದೇ ಸುಳಿವಿಲ್ಲ. ಆಕಸ್ಮಿಕ ಅಗ್ನಿ ದುರಂತದ ಬಗ್ಗೆ ಚಂದ್ರವ್ವ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಆ ರೀತಿ ಇದ್ದಲ್ಲಿ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಸುರೇಶ್ ತಿಳಿಸಿದ್ದಾರೆ.

ರಾಜಕಾರಣಿಗಳಿಂದ ಗಣಿಗಾರಿಕೆ
ಈ ಭಾಗದಲ್ಲಿ ನಿತ್ಯ ಗಣಿಗಾರಿಕೆ ನಡೆಯುವುದರಿಂದ ಇಲ್ಲಿನ ಜನರ ಮನೆಗಳಿಗೆ ಹಾಗೂ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಸ್ಥಳೀಯ ರಾಜಕಾರಣಿಗಳೇ ಗಣಿಗಾರಿಕೆ ನಡೆಸುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದರೆ ರೌಡಿಗಳನ್ನು ಬಿಟ್ಟು ಜನರನ್ನು ಬೆದರಿಸುತ್ತಾರೆ.
ಜನರು ತಮಗೆ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ದೂರು ನೀಡಲು ಮುಂದಾಗುತ್ತಿಲ್ಲ. ಒಂದು ವೇಳೆ ದೂರು ನೀಡಿದರೂ ಪ್ರಯೋಜನವಿಲ್ಲ.  ಏಕೆಂದರೆ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement