ಕಾಲುವೆಗೆ ನೀರು ಬಿಡಲು ರೈತ ಸಂಘ ಆಗ್ರಹ
ಶಹಾಪುರ: ರೈತರ ಒತ್ತಾಯಕ್ಕೆ ಮಣಿದು ಕಾಲುವೆಗಳಿಗೆ ನೀರು ಬಿಡಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಇದುವರೆಗೆ ಎಸ್ಬಿಸಿ ಮತ್ತು ಜೆಬಿಸಿ ಕಾಲುವೆಗೆ ನೀರು ಬಂದಿಲ್ಲ. ಆದ್ದರಿಂದ ಈ ಕಾಲುವೆಗೂ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಕೆಬಿಜೆಎನ್ನೆಲ್ ಮುಖ್ಯ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದರು.
ಇಲಾಖೆ ಅನೇಕ ವರ್ಷಗಳಿಂದ ಲಕ್ಷಾಂತರ ಎಕರೆ ಜಮೀನಿಗೆ ನೀರು ಒದಗಿಸುತ್ತಿದೆ.
ನೀರಾವರಿ ಸಲಹಾ ಸಮಿತಿ ಸಭೆ ಆದ ನಂತರ ವಾರಾಬಂದಿಯನ್ನು ಜಾರಿ ಮಾಡಿ ನೀರು ಉಳಿತಾಯ ಮಾಡಿರುವುದು ಅಭಿನಂದನಾರ್ಹ. ಆದರೆ ಇತ್ತೀಚೆಗೆ ಕಾಲುವೆಗೆ ನೀರು ಬಿಡುಗಡೆ ಮಾಡಿದರೂ, ಶಹಾಪುರ ಮತ್ತು ಜೇವರ್ಗಿ ಶಾಖಾ ಕಾಲುವೆಗಳಿಗೆ ನೀರು ಬಂದಿಲ್ಲ.
ಜೇವರ್ಗಿ ತಾಲೂಕಿನ 18ನೇ ಡಿಸ್ಟ್ರಿಬ್ಯೂಟರ್ವರೆಗೆ ನೀರು ಹರಿಸಬೇಕು. ಹೆಗ್ಗಿನಾಳ ಕೆರೆ, ಸೊನ್ನಕೆರೆ ಹಾಗೂ ಹಂಚನಾಳ ಕೆರೆಗಳಿಗೆ ನೀರು ತುಂಬಿಸಬೇಕು. ಇದರಿಂದ ದನಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವುದು. ರೈತರು ಸಾಕಷ್ಟು ಹಣ ಖರ್ಚು ಮಾಡಿ ಅಲ್ಪಾವಧಿ ಬೆಳೆಗಳನ್ನು ಬೆಳೆದಿದ್ದಾರೆ.
ಆದರೆ ನೀರಿನ ಕೊರತೆಯಿಂದ ಬೆಳೆ ಒಣಗುತ್ತಿವೆ. ಕೂಡಲೇ ಅಧಿಕಾರಿಗಳು ಮುತವರ್ಜಿ ವಹಿಸಿ ಎಸ್ಬಿಸಿ, ಜೆಬಿಸಿ ಕಾಲುವೆಗಳಿಗೆ ನೀರು ಹರಿಸಬೇಕೆಂದು ಸಂಘದ ಎಸ್.ಎಂ. ಸಾಗರ್, ಜೇವರ್ಗಿಯ ಸುಭಾಷ ಹೊಸ್ಮನಿ, ಸೋಮಶೇಖರ ಮಾಲಿಪಾಟೀಲ, ರೈತ ಮುಖಂಡ ವೆಂಕೋಬರಾವ್, ಜೈಲಾಲ್ ತೋಟದಮನಿ, ಅಣ್ಣಾರಾವ್ ಮಾಗಣಗೇರಿ, ಚಂದ್ರಕಾಂತ ವಿಶ್ವಕರ್ಮ ಮನವಿ ಮಾಡಿದ್ದಾರೆ.