ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

432 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

Lingaraj Badiger
Updated On : 8 Mar 2013, 10:55 am

ಯಾದಗಿರಿ: ಜಿಲ್ಲೆಯ 4 ನಗರ ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ಶಾಂತಿಯುತ ಮತದಾನ ಪ್ರಕ್ರಿಯೆ ನಡೆದಿದ್ದು, 432 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ. ಮತದಾರರು ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳಿಗೆ ಬಂದು ಹಕ್ಕು ಚಲಾಯಿಸಿದರು. ಬಿಸಿಲು ಏರುತ್ತಿದ್ದಂತೆ ಮತದಾನ ಪ್ರಕ್ರಿಯೆ ಜೋರಾಗಿ ಸಾಗಿತು. ಮಧ್ಯಾಹ್ನ ತುಸು ನಿಧಾನಗತಿಯಲ್ಲಿ ಮತದಾನ ನಡೆದು, ನಂತರ ಕೊನೆ ಒಂದು ಗಂಟೆ ಅವಧಿಯಲ್ಲಿ ಮತ್ತೆ ಬಿರುಸಿನ ಮತದಾನ ನಡೆಯಿತು. ಯಾದಗಿರಿ ನಗರಸಭೆ, ಶಹಾಪುರ ಹಾಗೂ ಸುರಪುರ ಪುರಸಭೆ, ಗುರುಮಠಕಲ್ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಜರುಗಿತು. ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ವೃದ್ಧರು, ಮಹಿಳೆಯರು ಹುರುಪಿನಿಂದ ಮತ ಚಲಾಯಿಸಲು ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕೆಲಕಾಲ ಗೊಂದಲ: ಕೆಲವು ಕಡೆಗಳಲ್ಲಿ ಸಣ್ಣಪುಟ್ಟ ಗೊಂದಲಗಳು ನಡೆದಿವೆ. ಮತಪಟ್ಟಿಯಲ್ಲಿ ಹೆಸರಿಲ್ಲದೇ ಅನೇಕರು ಹಕ್ಕು ಚಲಾಯಿಸಲಾಗದೇ ಹತಾಶೆ ವ್ಯಕ್ತಪಡಿಸಿದ ಘಟನೆ ಜರುಗಿದೆ. ಶಹಾಪುರದ ವಾರ್ಡ್ ನಂ.5ರಲ್ಲಿ ಮಹಿಳೆಯೊಬ್ಬರ ಮತವನ್ನು ಬೇರೆ ಯಾರೋ ಮೊದಲೇ ಹಾಕಿದ್ದ ಘಟನೆ ಜರುಗಿ ಗೊಂದಲಕ್ಕೆ ಕಾರಣವಾಯಿತು. ಯಾದಗಿರಿಯ ವಾರ್ಡ್ ನಂ.2ರಲ್ಲಿ ಮತಯಂತ್ರ ದೋಷದಿಂದ ಸ್ವಲ್ಪ ಸಮಯ ಪ್ರಕ್ರಿಯೆ ವಿಳಂಬವಾಯಿತು. ಅಲ್ಲದೇ ಒಂದೇ ಕುಟುಂಬದ ಒಬ್ಬರಿಗೆ ಒಂದು ಮತಗಟ್ಟೆ, ಮತ್ತೊಬ್ಬರಿಗೆ ಇನ್ನೊಂದು ಮತಗಟ್ಟೆ ವ್ಯಾಪ್ತಿಗೆ ಸೇರಿಸಿದ್ದೂ ಗೊಂದಲಗಳಿಗೆ ಕಾರಣವಾಯಿತು. ಇನ್ನುಳಿದಂತೆ ಚುನಾವಣಾ ಪ್ರಕ್ರಿಯೆ ಜಿಲ್ಲಾದ್ಯಂತ ಶಾಂತಿಯುತವಾಗಿ ಜರುಗಿತು.
ಡಿಮಸ್ಟರಿಂಗ್ ಕೇಂದ್ರಕ್ಕೆ ಮತಯಂತ್ರ: ಯಾದಗಿರಿ ನಗರಸಭೆಯ 31 ವಾರ್ಡುಗಳಿಗೆ 147 ಅಭ್ಯರ್ಥಿಗಳು, ಶಹಾಪುರ ಪುರಸಭೆಯ 23 ವಾರ್ಡುಗಳಿಗೆ 105, ಸುರಪುರದ 27 ವಾರ್ಡುಗಳಿಗೆ 98 ಹಾಗೂ ಗುರುಮಠಕಲ್ ಪಟ್ಟಣ ಪಂಚಾಯಿತಿಯ 17 ವಾರ್ಡುಗಳಿಗೆ 82 ಸೇರಿದಂತೆ ಒಟ್ಟು 98 ವಾರ್ಡುಗಳಿಗೆ 432 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತಗಟ್ಟೆ ಸಿಬ್ಬಂದಿ ಮತಯಂತ್ರಗಳನ್ನು ಪೊಲೀಸ್ ಭದ್ರತೆಯಲ್ಲಿ ನಿಗದಿತ ಡಿಮಸ್ಟರಿಂಗ್ ಕೇಂದ್ರಕ್ಕೆ ಒಯ್ದಿದ್ದಾರೆ. ಅಲ್ಲಿ ಮತಯಂತ್ರಗಳನ್ನು ಭದ್ರವಾಗಿ ಇರಿಸುವ ಕಾರ್ಯ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement