ಡಿಶುಂ.. ಡಿಶುಂ..
ಗುಲ್ಬರ್ಗ: ಸ್ಥಳೀಯ ಮಹಾನಗರ ಪಾಲಿಕೆ ವಾರ್ಡ್ 45ರ ಸುಂದರ ನಗರ ಬಡಾವಣೆ ಮತಗಟ್ಟೆ 277ರ ಮುಂಭಾಗ ಬ್ರಹ್ಮಪುರ ಠಾಣೆ ಸಿಪಿಐ ಶರಣಬಸಪ್ಪ ಭಜಂತ್ರಿ ಹಾಗೂ ಪುನರಾಯ್ಕೆ ಬಯಸಿ ಅಖಾಡದಲ್ಲಿರುವ ಬಿಜೆಪಿ ಹುರಿಯಾಳು ರಮಾನಂದ ಪೋಪಟಲಾಲ್ ಉಪಾಧ್ಯಾಯ ಇಬ್ಬರು ಹೊಡೆದಾಡಿದ ಪ್ರಸಂಗ ಗುರುವಾರ ನಡೆದಿದೆ.
ಮತಗಟ್ಟೆ 277ರಲ್ಲಿ ಮತದಾನ ಎಂದಿನಂತೆ ಸಾಗಿತ್ತು. ಬೆ.10 ಗಂಟೆ ಹೊತ್ತಿಗೆ ಇಲ್ಲಿಗೆ ಬಿಜೆಪಿ ಅಭ್ಯರ್ಥಿ ರಮಾನಂದ ಉಪಾಧ್ಯಾಯ ಬೆಂಬಲಿಗರೊಂದಿಗೆ ಬಂದಾಗ ಸಮಸ್ಯೆ ಮೊಳಕೆಯೊಡೆಯಿತು. ಬಂದೋಬಸ್ತ್ ರೌಂಡ್ನಲ್ಲಿದ್ದ ಸರ್ಕಲ್ ಇನ್ಸ್ಪೆಕ್ಟರ್ ಭಜಂತ್ರಿ ಮತದಾನದ ಈ ವೇಳೆಯಲ್ಲಿ ಗುಂಪಾಗಿ ಮತಗಟ್ಟೆ ಪ್ರವೇಶಿವುದು, ಮತಗಟ್ಟೆ ಮುಂದೆ ನಿಲ್ಲುವುದು ಯಾಕೆ ಎಂದು ರಮಾನಂದ ಹಾಗೂ ಬೆಂಬಲಿಗರ ಉಪಸ್ಥಿತಿಯನ್ನು ಬಲವಾಗಿ ಆಕ್ಷೇಪಿಸಿದ್ದಾರೆ.
ಇದೇ ಹೊತ್ತಲ್ಲಿ ವಾಗ್ವಾದ, ಅವಾಚ್ಯ ಶಬ್ದಗಳ ವಿನಿಮಯವಾಗಿತ್ತು. ಮತಗಟ್ಟೆ ಅಂಗಳದಲ್ಲಿ ನಡೆದ ಈ ಬೆಳವಣಿಗೆಯಿಂದ ವ್ಯಗ್ರರಾದಂತೆ ಕಂಡುಬಂದ ಉಪಾಧ್ಯಾಯ ಮತ್ತು ಬೆಂಬಲಿಗರು ತಮ್ಮ ಪಕ್ಷದ ನಾಯಕರನ್ನು ಅಲ್ಲಿಗೆ ಬರಮಾಡಿಕೊಂಡು ಪೊಲೀಸ್ ಧೋರಣೆಯನ್ನು ಆಕ್ಷೇಪಿಸಿದರು. ಇದು ಗಲಾಟೆ ಇನ್ನೂ ಹೆಚ್ಚುವಂತೆ ಮಾಡಿತೆಂದು ಪ್ರತ್ಯಕ್ಷದರ್ಶಿಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದರು.
ನಮೋಶಿ ಸಮ್ಮುಖದಲ್ಲೇ..: ಅಭ್ಯರ್ಥಿ ರಮಾನಂದ ಹಾಗೂ ಬೆಂಬಲಿಗರ ಕರೆಯ ಮೇರೆಗೆ ವಾರ್ಡ್ 45ರ ಮತಗಟ್ಟೆ 277ಕ್ಕೆ ಎಂಎಲ್ಸಿ ಶಶಿಲ್ ನಮೋಶಿ ಧಾವಿಸಿ ಹೋಗಿದ್ದಾರೆ. ಗಲಾಟೆ ಬಗ್ಗೆ ಸರ್ಕಲ್ ಭಜಂತ್ರಿ ಅವರೊಂದಿಗೆ ಮಾತುಕತೆಗಿಳಿದು ಮಾಹಿತಿ ಪಡೆಯುತ್ತಿದ್ದಾಗಲೇ ಬಿಜೆಪಿ ಅಭ್ಯರ್ಥಿ ರಮಾನಂದ ಹಾಗೂ ಸರ್ಕಲ್ ಭಜಂತ್ರಿ ನಡುವೆ ಮಾತಿನ ಚಕಮಕಿ ಶುರುವಾಗಿದೆ.
ಇಷ್ಟೊತ್ತಿಗಾಗಲೇ ಅಭ್ಯರ್ಥಿ ರಮಾನಂದ ಅವರ ತಂದೆ ಪೋಪಟಲಾಲ್ ಉಪಾಧ್ಯಾಯ ಮತ್ತು ಬೆಂಬಲಿಗರು ಜಮಾಯಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯು ಸರ್ಕಲ್ನನ್ನು ಗುರಿಯಾಗಿಸಿಕೊಂಡು ಅವಾಚ್ಯ ಶಬ್ದ ಪ್ರಯೋಗಿಸಿದಾಗ ಕೋಪಗೊಂಡ ಭಜಂತ್ರಿ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಕುಪಿತರಾದ ರಮಾನಂದ ಸಿಪಿಐ ಭಜಂತ್ರಿಗೆ ಕಾಲಿನಿಂದ ಜಾಡಿಸಿ ಒದ್ದಿದ್ದಾರೆ.
ಹೀಗೆ ಎಂಎಲ್ಸಿ ಶಶಿಲ್ ನಮೋಶಿ ಸಮ್ಮುಖದಲ್ಲೇ ಸರ್ಕಲ್ ಹಾಗೂ ಬಿಜೆಪಿ ಅಭ್ಯರ್ಥಿ ಇಬ್ಬರೂ ಕೆಲ ಹೊತ್ತು ಪರಸ್ಪರ ಹೊಡೆದಾಡಿಕೊಂಡದ್ದನ್ನು ಮತದಾನಕ್ಕೆ ಬಂದ ಅನೇಕರು ಗಲಾಟೆ ಕಂಡು ಹೌಹಾರಿ ಕೆಲ ಹೊತ್ತು ಜಾಗ ಖಾಲಿ ಮಾಡಿದ್ದೂ ನಡೆಯಿತು.
ಲಘು ಲಾಠಿ ಪ್ರಹಾರ: ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇದೆಲ್ಲ 1 ಗಂಟೆ ನಡೆದಿದೆ. ಗೊಂದಲದ ನಂತರ ಪರಿಸ್ಥಿತಿ ತಿಳಿಯಾಗಿ ಮತ್ತೆ ಮತದಾನ ನಡೆದಿದೆ. ಮತಗಟ್ಟೆ ಹೊರಗಡೆ ಈ ಘಟನೆ ಸಂಭವಿಸಿದ್ದರಿಂದ ಮತದಾನಕ್ಕೆ ತೊಂದರೆ ಆಗಿಲ್ಲ. ಆದರೆ ವಾತಾವರಣ ಉದ್ವಿಗ್ನವಾಗಿತ್ತು, ನಿಯಂತ್ರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಸ್ ದಾಖಲು, ಯಾರನ್ನೂ ಬಂಧಿಸಿಲ್ಲ
ವಾರ್ಡ್ 45ರ ಅಭ್ಯರ್ಥಿ- ಸಿಪಿಐ ಹೊಡೆದಾಡಿದ ಪ್ರಸಂಗದ ಬಗ್ಗೆ ಪ್ರಕರಣ ದಾಖಲಿಸುತ್ತೇವೆ. ಕರ್ತವ್ಯದ ಮೇಲಿರುವ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡುವುದು ತಪ್ಪು. ಇದೊಂದು ಗಂಭೀರ ಪ್ರಕರಣ. ಕಾನೂನು ಪ್ರಕಾರ ಕ್ರಮ ಜರುಗಿಸುತ್ತೇವೆ. ಪೊಲೀಸ್ ಅಧಿಕಾರಿ ಸ್ಥಳೀಯರಾಗಿದ್ದ ಕಾರಣ ಈ ಪ್ರಸಂಗ ಸಂಭವಿಸಿರಬಹುದು. ಆದರೆ ಅದನ್ನು ಹಗುರವಾಗಿ ತೆಗೆದುಕೊಳ್ಳಲಾಗದು. ಇದುವರೆಗೂ ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ. ಚುನಾವಣೆ ಬಳಿಕ ಘಟನಾವಳಿ ಬಗ್ಗೆ ಗಮನ ಹರಿಸುತ್ತೇವೆ.
ಎನ್. ಸತೀಶಕುಮಾರ್, ಎಸ್ಪಿ, ಗುಲ್ಬರ್ಗ
ಆಳಂದ ಪುರಸಭೆಯಲ್ಲಿ ಶೇ. 68.73 ಮತದಾನ
ಆಳಂದ: ಸ್ಥಳೀಯ ಪುರಸಭೆಗೆ 23 ವಾರ್ಡ್ಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಒಟ್ಟ 23, 797 ಮತದಾರರಲ್ಲಿ 8631 ಮಂದಿ ಪುರುಷ ಹಾಗೂ 7724 ಮಹಿಳೆಯರು ಸೇರಿ 16, 355 ಮತದಾರರು ಮತಚಲಾಯಿಸಿರುವುದು ಒಟ್ಟು ಶೇಕಡಾ 68. 73 ಮತದಾನ ನಡೆದಿದೆ.
ಮತಗಟ್ಟೆ 6ರಲ್ಲಿ ಶೇ. 82. 54 ಅತಿ ಹೆಚ್ಚು ಮತದಾನವಾದರೆ, ಮತಗಟ್ಟೆ 12ರಲ್ಲಿ ಶೇ. 56. 77 ಅತಿ ಕಡಿಮೆ ಮತದಾನ ನಡೆದಿದೆ. ವಾರ್ಡ್ 1 ರಿಂದ 23 ರವರೆಗೆ ನಡೆದ ಮತದಾನದ ಮಾಹಿತಿ ಹೀಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.