ಮಹಿಳೆಯರು ಅಪರಾಧಗಳ ವಿರುದ್ಧ ಸಿಡಿದೇಳಲಿ
ಯಾದಗಿರಿ: ದೆಹಲಿಯ ಸಾಮೂಹಿಕ ಅತ್ಯಾಚಾರದ ಅಮಾನುಷ ಘಟನೆಯ ಕರಾಳ ನೆನಪುಗಳಿನ್ನೂ ಅಳಿಸಿಹೋಗಿಲ್ಲ. ಅದರ ಹಿಂದೆಯೇ ಇನ್ನೂ ಅನೇಕ ಅಪರಾಧ ಪ್ರಕರಣಗಳು ಮರುಕಳಿಸುತ್ತಲೇ ಇವೆ. ವಿಕೃತ ಮನಸ್ಸಿನ ಪಾತಕಿಗಳಿಗೆ ಅಮಾಯಕರು ಬಲಿಯಾಗುತಿದ್ದು, ಇಂತಹ ಅಪರಾಧಗಳ ವಿರುದ್ಧ ಸಿಡಿದೇಳಬೇಕೆಂದು ಎಐಎಂಎಸ್ಎಸ್ ರಾಜ್ಯ ಕಾರ್ಯದರ್ಶಿ ಬಿ.ಆರ್. ಅಪರ್ಣಾ ಕರೆ ನೀಡಿದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಜಿಲ್ಲಾ ಸಮಿತಿಯಿಂದ ನಗರದ ಜವಾಹರ್ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಕ್ರೂರ ಪಾತಕ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ದೇಶದೆಲ್ಲೆಡೆ ಸಾಕಷ್ಟು ಪ್ರತಿರೋಧ ಬೆಳೆಯುತ್ತಿದ್ದರೂ, ಊಹಿಸಲಾಗದಷ್ಟು ಕ್ರೂರ ಪಾತಕಗಳು ನಡೆಯುತ್ತಲೇ ಇದೆ. ಇವಕ್ಕೆಲ್ಲಾ ಕೊನೆ ಇಲ್ಲವೇ ಎನ್ನುವ ಪ್ರಶ್ನೆ ಇಂದು ಪ್ರಜ್ಞಾವಂತರನ್ನು ಕಾಡುತ್ತಿವೆ.
ಬಹಳಷ್ಟು ಅಪರಾಧಗಳ ಹಿಂದೆ ಕಾಣುವುದು ಅಪರಾಧಿಯ ವಿಕೃತ ಮನೋಭಾವ. ಮಹಿಳೆ ಒಂದು ಭೋಗದ ವಸ್ತು ಎಂಬ ಅಭಿಪ್ರಾಯವನ್ನು ಹರಿಬಿಡುವಲ್ಲಿಂದ ಆರಂಭವಾಗಿ ಲೈಂಗಿಕತೆ ಪ್ರಚೋದಿಸುವ ನೃತ್ಯಗಳು, ಸಂಭಾಷಣೆಗಳು, ವಿವಿಧ ರೀತಿಯ ಕ್ರೌರ್ಯಗಳು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಮಾಧ್ಯಮಗಳ ಮೂಲಕ ಅಶ್ಲೀಲತೆ, ಹಿಂಸೆಗಳ ಪ್ರಚಾರ ಅಡೆತಡೆಯಿಲ್ಲದೆ ಸಾಗುತ್ತಿದೆಂದು ಹೇಳಿದರು.
ನಿಷ್ಕ್ರಿಯತೆ ಖಂಡನೀಯ: ಮಹಿಳೆಯರ ಮೇಲೆ ಅಪರಾಧವೆಸಗುವ ಪಾತಕಿಗಳಿಗೆ ಬಹುತೇಕ ಸಂದರ್ಭಗಳಲ್ಲಿ ಶಿಕ್ಷೆಯಾಗದೇ ಇರುವುದು ಅಪರಾಧಗಳ ಹೆಚ್ಚಳಕ್ಕೆ ಮತ್ತೊಂದು ಪ್ರಮುಖ ಕಾರಣ. ಸರ್ಕಾರಗಳ ಇಂತಹ ನಿಷ್ಕ್ರಿಯತೆ ಖಂಡನೀಯ ಎಂದರು.
ಎಸ್ಯುಸಿಐ(ಸಿ)ನ ಜಿಲ್ಲಾ ಸಮಿತಿ ಸಂಚಾಲಕ ಕೆ. ಸೋಮಶೇಖರ್ ಮಾತನಾಡಿದರು. ಡಿಇಡಿ ಕಾಲೇಜಿನ ಪ್ರಾಂಶುಪಾಲ ಸಮ್ಸಲಮ್, ಆಲ್ ಇಂಡಿಯಾ ಯುಟಿಯುಸಿ ಜಿಲ್ಲಾ ಸಂಘಟನಾ ಸಮಿತಿ ಸದಸ್ಯೆ ಡಿ. ಉಮಾದೇವಿ ಮಾತನಾಡಿದರು. ಅಧ್ಯಕ್ಷತೆಯನ್ನು ಜವಾಹರ್ ಪದವಿ ಕಾಲೇಜಿನ ಪ್ರಾಂಶುಪಾಲ ಇಕ್ಬಾಲ್ ಖಾಸಿಂ ವಹಿಸಿದ್ದರು. ಶ್ವೇತಾ ವಿ.ಎಸ್. ಸ್ವಾಗತಿಸಿ ಜಯಲಕ್ಷ್ಮೀ ಎಸ್.ಕೆ. ವಂದಿಸಿ ಬಸಮ್ಮ ನಿರೂಪಿಸಿದರು. ಗೌರಮ್ಮ ಕ್ರಾಂತಿಗೀತೆ ಹಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.