ನಗರಸಭೆಗೆ ತಾಯಿ, ಮಗಳು ಪ್ರವೇಶ
ಯಾದಗಿರಿ: ಇಲ್ಲಿಯ ನಗರಸಭೆಗೆ ನಡೆದ ಚುನಾವಣೆಯಲ್ಲಿ ನಿರ್ಗಮಿತ ಅಧ್ಯಕ್ಷೆ ಲಲಿತಾ ಅನಪುರ ಹಾಗೂ ಅವರ ತಾಯಿ ರಾಚಮ್ಮ ಅನಪುರ ಇಬ್ಬರೂ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ನಗರಸಭೆ ಪ್ರವೇಶಿಸಿದ್ದಾರೆ.
ವಾರ್ಡ್ ನಂ.4 ರಿಂದ ಸ್ಪರ್ಧಿಸಿದ್ದ ರಾಚಮ್ಮ ಮೌಲಾಲಿ ಅನಪುರ ಕೆಜೆಪಿಯ ಪದ್ಮಾ ಅವರನ್ನು 80 ಮತಗಳ ಅಂತರದಿಂದ ಸೋಲಿಸಿ ನಗರಸಭೆಯನ್ನು ಪ್ರಥಮ ಬಾರಿಗೆ ಪ್ರವೇಶಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿ, ನಂತರ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿದ್ದ ಲಲಿತಾ ಮೌಲಾಲಿ ಅನಪುರ ಅವರು ಈ ಬಾರಿ ಬಿಎಸ್ಸಾರ್ ಕಾಂಗ್ರೆಸ್ ಸೇರಿ 31ನೇ ವಾರ್ಡಿನಿಂದ ಸ್ಪರ್ಧಿಸಿದ್ದರು. ಈ ವಾರ್ಡಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಬಲ ಪೈಪೋಟಿ ನೀಡಿದ್ದರಿಂದ ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಉಂಟಾಗಿತ್ತು. ಆದರೆ ಅಂತಿಮವಾಗಿ ಲಲಿತಾ ಅನಪುರ ಅವರು ಕಾಂಗ್ರೆಸ್‌ನ ವಿಕ್ಟೋರಿಯಾ ಫರ್ನಾಂಡಿಸ್ ಅವರನ್ನು 57 ಮತಗಳ ಅಂತರದಿಂದ ಸೋಲಿಸಿ ನಗರಸಭೆಗೆ ಪುನರಾಯ್ಕೆಯಾಗಿದ್ದಾರೆ.
ಕೆಪಿಪಿಸಿ ಸದಸ್ಯರಾಗಿದ್ದ ಮೌಲಾಲಿ ಅನಪುರ ಕಾಂಗ್ರೆಸ್ ತೊರೆದು ಬಿಎಸ್ಸಾರ್ ಕಾಂಗ್ರೆಸ್ ಸೇರಿ ನಗರಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಕುಟುಂಬದ ಇಬ್ಬರು ಸೇರಿದಂತೆ ಒಟ್ಟು 4 ಸದಸ್ಯರು ಬಿಎಸ್ಸಾರ್ ಪಕ್ಷದಿಂದ ಆಯ್ಕೆಯಾಗುವ ಮೂಲಕ ಮೌಲಾಲಿ ಅವರ ಬಲ ಪ್ರದರ್ಶನವೂ ಆದಂತಾಗಿದೆ.
ಅಲ್ಲದೇ ಮಾಜಿ ಅಧ್ಯಕ್ಷೆ ಜೆಡಿಎಸ್‌ನ ನಾಗರತ್ನಾ ಅನಪುರ ಅವರೂ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ನಿಂದ ವಾರ್ಡ್ ನಂ.4 ರಿಂದ ಸ್ಪರ್ಧಿಸಿ ಕೇವಲ 4 ಮತಗಳ ಅಂತರದಿಂದ ನಾಗರತ್ನಾ ಗೆಲುವು ಸಾಧಿಸಿದ್ದಾರೆ. ಅನಪುರ ಕುಟುಂಬದ ಒಟ್ಟು ಮೂವರು ನಗರಸಭೆ ಪ್ರವೇಶಿಸಿದಂತಾಗಿದೆ.