ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಾಧ್ಯಮ ಕೇಂದ್ರ ಅವ್ಯವಸ್ಥೆ: ಅಸಮಾಧಾನ

Lingaraj Badiger
Updated On : 12 Mar 2013, 10:33 am

ಯಾದಗಿರಿ: ನಗರದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯ ಮತ ಎಣಿಕೆ ಕೇಂದ್ರದಲ್ಲಿ ನಗರಸಭೆ ಚುನಾವಣೆಯ ಫಲಿತಾಂಶ ಹಾಗೂ ಮತ ಎಣಿಕೆ ಕಾರ್ಯದ ಮಾಹಿತಿ ನೀಡಲು ಸ್ಥಾಪಿಸಿದ್ದ ಮಾಧ್ಯಮ ಕೇಂದ್ರವು ಕೇವಲ ಮಾಧ್ಯಮದವರು ಕುಳಿತುಕೊಳ್ಳಲು ಮಾಡಿದ ಸ್ಥಳವಾಗಿತ್ತು. ಕ್ಷಣಕ್ಷಣದ ಮಾಹಿತಿ ಸಿಗದೇ ಮಾಧ್ಯಮದವರು ಪರದಾಡುವಂತಾಯಿತು.
ಮತ ಎಣಿಕೆ ಕಾರ್ಯವು ಕಟ್ಟಡದ ಮೇಲ್ಮಹಡಿಯಲ್ಲಿ ನಡೆಯುತ್ತಿದ್ದರೆ ಮಾಧ್ಯಮ ಕೇಂದ್ರವನ್ನು ನೆಲ ಮಹಡಿಯಲ್ಲಿ ಮಾಡಲಾಗಿತ್ತು. ಮಾಧ್ಯಮ ಕೇಂದ್ರದಲ್ಲಿ ಸ್ಕ್ರೀನ್ ಹಾಕಲಾಗಿದ್ದರೂ, ಅದರಲ್ಲಿ ಯಾವುದೇ ಮಾಹಿತಿ ಬರುತ್ತಿರಲಿಲ್ಲ. ಅಲ್ಲದೇ ಮೈಕ್‌ನಲ್ಲಿ ಫಲಿತಾಂಶ ಘೋಷಣೆ ಮಾಡುವುದೂ ಅಲ್ಲಿ ಕೇಳುತ್ತಿರಲಿಲ್ಲ. ಪಾರದರ್ಶಕವಾಗಿ ಚುನಾವಣಾ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿರುವ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ ಅವರು ಮಾಧ್ಯಮದವರನ್ನು ದೂರ ಇಟ್ಟೇ ಎಲ್ಲಾ ಕಾರ್ಯ ಮುಗಿಸಿದ್ದು ಮಾಧ್ಯಮದವರ ಅಸಮಾಧಾನಕ್ಕೆ ಕಾರಣವಾಗಿದೆ. ಮಾಧ್ಯಮದವರನ್ನು ಒಮ್ಮೆಯೂ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಆದ್ದರಿಂದ ಈ ಕೇಂದ್ರ ಮಾಧ್ಯಮದವರು ಕುಳಿತುಕೊಳ್ಳಲು ಮಾಡಿದ ಸ್ಥಳದಂತಾಗಿತ್ತು. ಎಲ್ಲಕ್ಕೂ ನಿಯಂತ್ರಣ: ಮತ ಎಣಿಕೆ ಪ್ರಕ್ರಿಯೆಯ ವೀಡಿಯೋ ಚಿತ್ರೀಕರಣ ಹಾಗೂ ಛಾಯಾಚಿತ್ರ ತೆಗೆಯಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಲಾಯಿತು. ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿರ್ದೇಶನ ಇರುವುದರಿಂದ ಮಾಧ್ಯಮದವರಿಗೆ ಅಲ್ಲಿ ಅವಕಾಶವಿಲ್ಲ ಎಂದು ಹೇಳಿದವರು, ಮತ್ತೆ ಮುಖ ತೋರಿಸಲಿಲ್ಲ. ಪಾರದರ್ಶಕ ರೀತಿ ಎಂದರೆ ಇದೇ ಇರಬೇಕು ಎಂದುಕೊಂಡು ಮಾಧ್ಯಮದವರು ಸುಮ್ಮನಾದರು. ಇಂಥ ಅವ್ಯವಸ್ಥೆಯ ಹಾಗೂ ಸಮರ್ಪಕ ಮಾಹಿತಿ ನೀಡಲು ಸಾಧ್ಯವಿಲ್ಲದಿದ್ದರೆ ಮಾಧ್ಯಮ ಕೇಂದ್ರ ತೆರೆಯುವ ಅಗತ್ಯ  ಏನು ಎನ್ನುವುದು ಮಾಧ್ಯಮದವರು ಪ್ರಶ್ನೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement