ನೀರಿನ ವ್ಯವಸ್ಥೆಗೆ ಕಾಮಗಾರಿ ನಡೆಸಿದ್ದರೂ ಮರೆಯಾಗದ ಸಮಸ್ಯೆ
ಯಾದಗಿರಿ: ತಾಲೂಕಿನ ಸೈದಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಗಂಭೀರ ಚರ್ಚೆ ನಡೆಯಿತು.
ಅಧ್ಯಕ್ಷೆ ರಾಧಮ್ಮ ಬಾಗಪ್ಪನೋರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. 2013-14ನೇ ಸಾಲಿನಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಬಿಆರ್ಜಿಎಫ್ ಯೋಜನೆಯ ಕಾಮಾಗಾರಿ, 13ನೇ ಹಣಕಾಸು ಯೋಜನೆಯ ಕಾಮಗಾರಿಯ ಕ್ರಿಯಾ ಯೋಜನೆ ತಯಾರಿಸುವ ಕುರಿತು ಚರ್ಚಿಸಲಾಯಿತು.
ಇತ್ತೀಚೆಗೆ ಗ್ರಾಮದಲ್ಲಿ ಕಂಡು ಬಂದಿರುವ ನೀರಿನ ಸಮಸ್ಯೆಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶರಣಿ ಕುಮಾರ ದೋಖಾ ಉಲ್ಲೇಖಿಸಿದರು. ಈ ಬಗ್ಗೆ ಕೆಲ ಸಮಯದವರೆಗೆ ಗಂಭೀರ ಚರ್ಚೆ ನಡೆಯಿತು.
ಆಕ್ರೋಶ: ಈಗಾಗಲೇ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಭೀಮಾ ನದಿಯಿಂದ ಗ್ರಾಮಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು 2006ರಲ್ಲಿ ರಾಜೀವ್ ಗಾಂಧಿ ಯೋಜನೆಯಲ್ಲಿ ರು. 5 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೂ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಂಡು ಬಂದಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಅದಕ್ಕೆ ಸಂಬಂದಿಸಿದ ವಿವರವಾದ ಮಾಹಿತಿ ಪಡೆದರು.
ವಿಷಾದ: ಸಂಬಂಧಪಟ್ಟ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಭೆಗೆ ಕರೆಸಲಾಯಿತು. ಆದರೆ ಅಧಿಕಾರಿ ನೀಡಿದ ಉತ್ತರದಿಂದ ಅಸಮಾಧಾನಗೊಂಡ ಜಿಪಂ ಉಪಾಧ್ಯಕ್ಷರು, ಬೇಸಿಗೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಇನ್ನೂ ಹೆಚ್ಚಾಗುವುದು ನಿಶ್ಚಿತ. ಇದನ್ನು ಅರಿತು ಕೂಡಲೇ ಸಮಸ್ಯೆ ಪರಿಹರಿಸುವಂತೆ ಹೇಳಿದರು. ಸರ್ಕಾರದಿಂದ ಸಾಕಷ್ಟು ಅನುದಾನ ಲಭ್ಯವಿದೆ. ಆದರೆ ಅದರ ಸರಿಯಾದ ಸದುಯೋಗವಾಗುತ್ತಿಲ್ಲವೆಂದು ವಿಷಾದಿಸಿದರು.
ಸದಸ್ಯ ಬಸಪ್ಪ ಕ್ಯಾತಾನಾಳ ಮಾತನಾಡಿ, ಕೆಲ ದಿನಗಳವರೆಗೆ ಗ್ರಾಮಕ್ಕೆ ನೀರು ಹರಿಸಲಾಯಿತು. ನಂತರದ ದಿನಗಳಲ್ಲಿ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ನೀರು ಸರಬರಾಜಾಗುವ ಪೈಪುಗಳ ದುರವಸ್ಥೆಯೇ ಕಾರಣ ಎಂದು ಆರೋಪಿಸಿದರು. ಉಪಾಧ್ಯಕ್ಷೆ ಲಲಿತಾ ವೆಂಕಟೇಶ, ಪಿಡಿಒ ಶಿವರಾಯ, ಸದಸ್ಯರಾದ ಚಂದ್ರಶೇಖರ ವಾರದ, ಸುರೇಶ ಆನಂಪಲ್ಲಿ, ದೇವಪ್ಪ ರಾಚನಳ್ಳಿ, ಪ್ರೇಮಸಿಂಗ, ಪಾರ್ವತಮ್ಮ, ಗೌಶಾಬಿ, ಸಾಬಮ್ಮ ಇದ್ದರು.