ವಿಷಯುಕ್ತ ನೀರು ಸೇವನೆ, ಮೂರು ಎಮ್ಮೆಗಳ ಸಾವು
ಯಾದಗಿರಿ: ಹೂಳು ತುಂಬಿದ ಕೆರೆಯಲ್ಲಿ ನೀರು ಕುಡಿಯಲು ಹೋಗಿ 3 ಎಮ್ಮೆಗಳು ಮೃತಪಟ್ಟಿರುವ ಘಟನೆ ಸಮೀಪದ ನಾಯ್ಕಲ್ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಕೆರೆಯ ಪಕ್ಕದಲ್ಲಿ ಕ್ರಿಮಿನಾಶಕ ಬಾಟಲಿಗಳಿದ್ದು, ನೀರಿನಲ್ಲಿ ವಿಷ ಸೇರಿದ್ದರಿಂದ ಆ ನೀರನ್ನು ಕುಡಿದು ಎಮ್ಮೆಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಬಿಸಿಲಿನ ಬೇಗೆ ಹೆಚ್ಚಿರುವುದರಿಂದ ನಿತ್ಯವೂ ಈ ಕೆರೆಯಲ್ಲಿ ಹತ್ತಾರು ಜಾನುವಾರುಗಳು ನೀರು ಕುಡಿಯಲು ಹೋಗುತ್ತವೆ. ಎಂದಿನಂತೆ ಬುಧವಾರವೂ ಈ ಎಮ್ಮೆಗಳು ನೀರು ಕುಡಿದಿದ್ದು, ಮೃತಪಟ್ಟಿವೆ. ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಗೂಳಿ ಮತ್ತೊಂದು ಎಮ್ಮೆ ನೀರು ಕುಡಿದು ಅಸ್ವಸ್ಥಗೊಂಡಿದ್ದು, ನಂತರ ಚೇತರಿಸಿಕೊಳ್ಳುತ್ತಿವೆ.
ಪ್ರತಿ ಎಮ್ಮೆಯ ಮೌಲ್ಯ ಸುಮಾರು ರು. 25 ಸಾವಿರವಿದ್ದು, ಅವುಗಳ ವಾರಸುದಾರರು ಈಗ ಚಿಂತಿತರಾಗಿದ್ದಾರೆ. ರೈತರಾದ ಭೀಮಣ್ಣ ನೀಡಿಗಿ, ರಾಜಶೇಖರ ಆನೆಗುಂದಿ, ಅಬ್ದುಲ್ನಬಿ ಹೊಸಳ್ಳಿ ಎಂಬುವವರಿಗೆ ಈ ಎಮ್ಮೆಗಳು ಸೇರಿವೆ. ಸ್ಥಳಕ್ಕೆ ಪ್ರಮುಖರಾದ ಮಲ್ಲಿಕಾರ್ಜುನ ಅನಸುಗೂರ, ಮಲ್ಲಿಕಾರ್ಜುನರೆಡ್ಡಿ ಗೋಸ್ವಾಮಿ, ಚಂದ್ರಶೇಖರ ನೀಡಿಗಿ, ಭೀಮರಾಯ ತುಮಕೂರ, ಶೇಖರ ಬಡಿಗೇರ್, ಖಾಜಾಸಾಬ್ ಪಟವಾರಿ ಇತರರು ಭೇಟಿ ನೀಡಿದ್ದಾರೆ. ಮೃತ ಎಮ್ಮೆಗಳ ವಾರಸುದಾರರಿಗೆ ಪರಿಹಾರ ನೀಡುವಂತ ಆಗ್ರಹಿಸಿದ್ದಾರೆ.