ಸುರಪುರ: ಪಿಯು ಪರೀಕ್ಷೆ ಆರಂಭ
ಸುರಪುರ: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಗಳು ಆರಂಭಗೊಂಡಿವೆ. ಪಟ್ಟಣದ ಪ್ರಭು ಕಾಲೇಜು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ರಂಗಂಪೇಟೆಯ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜುಗಳ ಮೂರು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಬುಧವಾರ ಜರುಗಿದ ಇತಿಹಾಸ ಪರೀಕ್ಷೆಗೆ ಒಟ್ಟು 978 ವಿದ್ಯಾರ್ಥಿಗಳಲ್ಲಿ 131 ವಿದ್ಯಾರ್ಥಿಗಳು ಗೈರಾಗಿ 847 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪ್ರಭು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 471 ವಿದ್ಯಾರ್ಥಿಗಳ ಪೈಕಿ 440 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 31 ವಿದ್ಯಾರ್ಥಿಗಳು ಗೈರಾಗಿದ್ದರು. ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ 255 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ರಂಗಂಪೇಟೆಯ ಸರ್ಕಾರಿ ಸಂಯುಕ್ತ ಪಪೂ ಕಾಲೇಜಿನಲ್ಲಿ 152 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 30 ವಿದ್ಯಾರ್ಥಿಗಳು ಗೈರಾಗಿದ್ದರು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಪರೀಕ್ಷಾ ಅಕ್ರಮ ನಡೆದ ಬಗ್ಗೆ ವರದಿಯಾಗಿಲ್ಲ. ಇಲ್ಲಿನ ಪ್ರಭು ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಅದೇ ಕಾಲೇಜಿನ ಮೈದಾನದಲ್ಲಿ ಕ್ರಿಕೆಟ್ ಟೂರ್ನಿ ಆರಂಭಗೊಂಡಿದ್ದರಿಂದ ವಿಪರೀತ ಜನಜಂಗುಳಿ ಸೇರುತ್ತಿದೆ. ಕಾರಣ ಪರೀಕ್ಷಾ ಕೇಂದ್ರವನ್ನು ಬೇರೆಡೆಗೆ ವರ್ಗಾಯಿಸಬೇಕು ಅಥವಾ ಪರೀಕ್ಷೆಯ ದಿನ ಪಂದ್ಯಾವಳಿ ರದ್ದುಗೊಳಿಸಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.
ಶಿವರಾತ್ರಿ ಸಂದೇಶ ಇಂದು
ಸುರಪುರ: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದಲ್ಲಿ ಮಾ. 14ರ ಗುರುವಾರ ಸಂಜೆ 6 ಗಂಟೆಗೆ ಮಹಾಶಿವರಾತ್ರಿ ನಿಮಿತ್ತ ಶಿವರಾತ್ರಿ ಸಂದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಕೆ ರಾಗಿಣಿ ತಿಳಿಸಿದ್ದಾರೆ. ತಹಸೀಲ್ದಾರ್ ಮಹ್ಮದ ಗೌಸುದ್ದೀನ್ ಹಾಗೂ ಪಿಐ ರಾಜಕುಮಾರ ವಾಜಂತ್ರಿ ಅತಿಥಿಗಳಾಗಿರುತ್ತಾರೆ. ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.