ಕುಕೃತ್ಯಗಳಿಗೆ ಪ್ರೋತ್ಸಾಹ; ಕಳವಳ
ಯಾದಗಿರಿ: ಮಾಧ್ಯಮಗಳಲ್ಲಿ ಅವ್ಯಾಹತವಾಗಿ ಪ್ರಸಾರವಾಗುತ್ತಿರುವ ಕುಸಂಸ್ಕೃತಿ, ಮದ್ಯದ ಮಾರಾಟಕ್ಕೆ ನೀಡುತ್ತಿರುವ ಪ್ರೋತ್ಸಾಹ, ಅಧಿಕಾರ ಸ್ತರದಲ್ಲಿ ಪುರುಷ ಪ್ರಧಾನ ಧೋರಣೆ, ರಾಜಕಾರಣಿಗಳಿಂದ ಸಮಾಜ ವಿರೋಧಿ ಶಕ್ತಿಗಳ ಶ್ರೀರಕ್ಷೆ, ವಿಳಂಬವಾಗಿ ಸಿಗುವ ನ್ಯಾಯ ಇವೆಲ್ಲವೂ ಅಪರಾಧಿಗಳನ್ನು ಪ್ರೋತ್ಸಾಹಿಸಲು ನೆರವಾಗುತ್ತಿವೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಡಿ.ಉಮಾದೇವಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಕಂದಕೂರಿನ ಸರ್ಕಾರಿ ಹಾಸ್ಟೆಲ್ನಲ್ಲಿ ಆಲ್ ಇಂಡಿಯಾ ಯುಟಿಯುಸಿಗೆ ಸಂಯೋಜಿತವಾದ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ, ಕರ್ನಾಟಕ ಆಶಾ ಕಾರ್ಯಕರ್ತೆಯರ ಸಂಘ ಮತ್ತು ರಾಜ್ಯ ವಸತಿ ನಿಲಯ ಕಾರ್ಮಿಕರ ಸಂಘಗಳ ತಾಲೂಕು ಸಮಿತಿಗಳ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಮಾನವೀಯವಾದ ಅಪಾರಾಧಗಳನ್ನು ನಡೆಸಿದ ನಂತರವೂ ಅಪರಾಧಿಗಳು ಯಾವುದೇ ಶಿಕ್ಷೆ ಇಲ್ಲದೇ ನಿರಾತಂಕವಾಗಿ ತಿರುಗಾಡುತ್ತಿರುವುದು ಆತಂಕದ ಸಂಗತಿ ಎಂದರು.
ಕೆ.ಸೋಮಶೇಖರ ಮಾತನಾಡಿ, ರಾಜ್ಯದ 1.25 ಲಕ್ಷ ಅಂಗನವಾಡಿ ನೌಕರರು, 33 ಸಾವಿರ ಆಶಾ ಕಾರ್ಯಕರ್ತೆಯರು, 15 ಸಾವಿರ ಹಾಸ್ಟೆಲ್ ಕಾರ್ಮಿಕರು ಮತ್ತು 1.20 ಲಕ್ಷ ಅಕ್ಷರ ದಾಸೋಹ ನೌಕರರು ಸೇರಿದಂತೆ ದೇಶದಲ್ಲಿ ಲಕ್ಷಾಂತರ ಮಹಿಳೆಯರನ್ನು ಹೀನಾಯವಾಗಿ ದುಡಿಸಿಕೊಳ್ಳಲಾಗುತ್ತಿದೆ. ಹಲವರಿಗೆ ನೌಕರರ ಸ್ಥಾನಮಾನವನ್ನೇ ನಿರಾಕರಸಿ ಗೌರವಧನ, ಪ್ರೋತ್ಸಾಹ ಧನ, ಹೊರಗುತ್ತಿಗೆ ಮತ್ತಿತರ ಹೆಸರಿನಲ್ಲಿ ಪುಡಿಗಾಸಿಗೆ ಅನಿಯಮಿತವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಖಂಡಿಸಿದರು.
ಸರ್ಕಾರದ ಧೋರಣೆಗೆ ಖಂಡನೆ: ಈ ಕಾರ್ಮಿಕರು ದುಡಿಯುವ ಸ್ಥಳಗಳಲ್ಲಿ ಕನಿಷ್ಠ ಅವಶ್ಯಕತೆಗಳಾದ ಕುಡಿವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ, ಸೂಕ್ತ ಭದ್ರತೆಯನ್ನು ನೀಡದಿರುವ ಸರ್ಕಾರದ ಧೋರಣೆಯನ್ನು ಖಂಡಿಸಿದ ಅವರು, ಇದು ಮಹಿಳೆಯರ ಸಬಲೀಕರಣವೇ ಅಥವಾ ದುರ್ಬಲೀಕರಣವೇ ಎಂಬುದನ್ನು ಸರ್ಕಾರಗಳೇ ಉತ್ತರಿಸಬೇಕೆಂದರು. ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷೆ ಭಾರತಮ್ಮ ಅಧ್ಯಕ್ಷತೆ ವಹಿಸಿದ್ದರು.