ಕುರಿಕೋಟಾ ಸೇತುವೆ ಸಂಚಾರಕ್ಕೆ ಮುಕ್ತ
ಕ.ಪ್ರ. ವಾರ್ತೆ, ಗುಲ್ಬರ್ಗ, ಮಾ.14
ರಾ-ಹೆ 218ರ ಮೇಲೆ ಗುಲ್ಬರ್ಗ-ಬೀದರ್ ಮಾರ್ಗದ ಕುರಿಕೋಟಾ ಬಳಿ ಬೆಣ್ಣೆತೊರಾ ನದಿಗೆ ಅಡ್ಡಲಾಗಿರುವ ಶಿಥಿಲಾವಸ್ಥೆ ತಲುಪಿದ್ದ ಶತಮಾನ ಕಂಡ ಸೇತುವೆ ದುರಸ್ತಿಗೊಂಡಿದ್ದರಿಂದ ಕಳೆದ 9 ತಿಂಗಳಿಂದ ಸೇತುವೆ ಸಂಚಾರಕ್ಕೆ ಅಮರಿದ್ದ ಗ್ರಹಣ ಮೋಕ್ಷಗೊಂಡಿದೆ.
ಈ ಸೇತುವೆಯ 4, 5, 6ನೇ ಕಮಾನುಗಳಿಂದ ಕಲ್ಲುಗಳು, ಗಾರೆ ಕಳಚಿ ಬಿದ್ದು ಇಡೀ ಸೇತುವೆಯೇ ಶಿಥಿಲಗೊಂಡಿತ್ತು. ಈ ಕಮಾನುಗಳು, ಜೊತೆಗೆ ಸೇತುವೆ ಹೊಂದಿರುವ ಉಳಿದೆಲ್ಲ ಕಮಾನುಗಳನ್ನು ಬಲಗೊಳಿಸಲಾಗಿದ್ದರಿಂದ ಮಾ.16ರ ಬೆಳಗಿನಿಂದ ಈ ಸೇತುವೆ ಎಲ್ಲ ವಾಹನಗಳ ಸಂಚಾರಕ್ಕೂ ತೆರೆದುಕೊಳ್ಳಲಿದೆ. 2012ರ ಜುಲೈ 3ರಿಂದ ಈ ಸೇತುವೆ ಮೇಲಿನ ಎಲ್ಲ ತರಹದ ವಾಹನ ಸಂಚಾರ ನಿಷೇಧಗೊಳಿಸಲಾಗಿತ್ತು.
2013ರ ಮೇ ತಿಂಗಳ 31ರೊಳಗಾಗಿ ಸೇತುವೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಗುತ್ತಿಗೆ ಷರತ್ತಿನ ನಿಯಮವಾಗಿತ್ತು. ಆದರೆ ಗುತ್ತಿಗೆದಾರರು ಕಾಮಗಾರಿಯನ್ನು ಬೇಗನೆ ಪೂರೈಸಿ ಮಾ.16ರಂದೇ ಸೇತುವೆಯನ್ನು ಎಲ್ಲ ತರಹದ ವಾಹನಗಳಿಗೆ ಸಂಚಾರಕ್ಕೆ ಮುಕ್ತವಾಗಿಸುವ ದಿಶೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಇದು ತುಂಬ ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೆಳಮಗಿ ಹೇಳಿದ್ದಾರೆ.
ಕುರಿಕೋಟಾ ಸೇತುವೆ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 9 ತಿಂಗಳಿಂದ ಈ ಭಾಗದ ಜನತೆ, ಈ ರಸ್ತೆ ಬಳಸುವ ಎಲ್ಲ ವರ್ಗದ ಸಾರಿಗೆ ಸಂಚಾರಕ್ಕೆ ತೊಂದರೆ ಎದುರಾಗಿತ್ತು ಎಂದರು.
ತೆಂಗು ಒಡೆದು ಉದ್ಘಾಟನೆ: ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಈ ಸೇತುವೆಗೆ ಕರ್ಪೂರದ ಆರತಿ ಮಾಡಿ, ತೆಂಗು ಒಡೆದು ಸಾರ್ವಜನಿಕರ ಬಳಕೆಗೆ ಅರ್ಪಿಸಿದರು.
ಮಾ.16ರಿಂದ ಎಲ್ಲಾ ತರಹದ ವಾಹನಗಳಿಗೆ ಸೇತುವೆ ಮುಕ್ತವಾಗಲಿದೆ. ವಾಹನಗಳ ಭಾರ, ಇತ್ಯಾದಿಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್ ಚವ್ಹಾಣ್ ಹೇಳಿದ್ದಾರೆ.