ಕಳ್ಳತನ ಆರೋಪಿ ಸೆರೆ, ಆಭರಣ ವಶ
ಯಾದಗಿರಿ: ಇಲ್ಲಿಯ ಬಸವೇಶ್ವರ ನಗರದ ಮನೆಯೊಂದರಲ್ಲಿ ಕೆಲ ದಿನಗಳ ಹಿಂದೆ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಬಳ್ಳಾರಿಯ ಸೋಮಶೇಖರ ಬೋವಿ ಬಂಧಿತ ಆರೋಪಿ. ಕಳೆದ ಮಾ. 2ರಂದು ಬಸವೇಶ್ವರ ನಗರದ ವೆಂಕಟೇಶ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 1.60 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಡಿಎಸ್ಪಿ ಎಸ್.ಡಿ. ಕಟ್ಟಿಮನಿ ಮಾರ್ಗದರ್ಶನದಲ್ಲಿ ಸಿಪಿಐ ಶಂಕರಗೌಡ ಪಾಟೀಲ, ಅಪರಾಧ ವಿಭಾಗದ ನಾಗಿರೆಡ್ಡಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.