ಖಾನಾಪುರ ಅಭಿವೃದ್ಧಿಗೆ ಮೊದಲಾದ್ಯತೆ: ಶಾಸಕ
ಯಾದಗಿರಿ: ಶಹಾಪುರ ತಾಲೂಕಿನ ಖಾನಾಪುರದ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಶಾಸಕ ಡಾ. ಮಾಲಕರೆಡ್ಡಿ ಹೇಳಿದರು.
ಖಾನಾಪುರದಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿಯ 4ನೇ ಹಂತದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೆರಿಸಿ ಮಾತನಾಡಿ, ಕ್ಷೇತ್ರದ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅದಕ್ಕೆ ತಕ್ಕಂತೆ ಅನುದಾನ ಮಂಜೂರು ಮಾಡಲಾಗುತ್ತಿದೆ. ಗ್ರಾಮದಲ್ಲಿ ಅವಶ್ಯಕತೆ ಇರುವ ಕಡೆಗೆ ಚರಂಡಿ, ಸಿಸಿ ರಸ್ತೆ, ಸಮುದಾಯ ಭವನ, ಅಂಗನವಾಡಿ ಕಟ್ಟಡ, ವಿದ್ಯುತ್ ಕಂಬಗಳ ಅಳವಡಿಕೆ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಗ್ರಾಮದ ಜನರ ಸಹಕಾರವೂ ಬೇಕು. ಗ್ರಾಮದ ಅಭಿವೃದ್ಧಿ ಕಡೆ ಕಾಳಜಿ ವಹಿಸಿ ಉತ್ತಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕೆಂದರು.
ಮೂಲ ಸೌಲಭ್ಯಕ್ಕೆ ಆದ್ಯತೆ ಕೊಡಿ: ಜಿಪಂ ಸದಸ್ಯ ದೇವರಾಜ್ ನಾಯಕ್ ಮಾತನಾಡಿ, ಖಾನಾಪುರ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ವಿವಿಧ ಕಾಮಗಾರಿ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಇದೇ ರೀತಿ ಶಾಸಕರು ಎಲ್ಲ ಗ್ರಾಮಗಳ ಅಭಿವೃದ್ಧಿ ಕಡೆಗೂ ಗಮನ ನೀಡಬೇಕು. ಮೂಲ ಸೌಲಭ್ಯಗಳಾದ ಕುಡಿವ ನೀರು, ರಸ್ತೆ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ರಾಜಕುಮಾರ ಸಾಹುಕಾರ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಯಂಕಮ್ಮ, ಗ್ರಾಪಂ ಉಪಾಧ್ಯಕ್ಷೆ ಮಲ್ಲಮ್ಮ ಅಲೂರ, ಎಸ್.ಪಿ. ನಾಗೂರೆ, ರಾಮಣ್ಣ ಸಾಹು, ನಾರಾಯಣ ಸಾಹು, ಮಲ್ಲಯ್ಯ ಭಂಡಾರಿ, ರಾಹುಲ್ ಅರಕೇರಿ, ರಾಮಲಿಂಗಪ್ಪ ಕೊಂಚೆಟ್ಟಿ, ನೀಲಕಂಠಪ್ಪ ಸಾಹು, ರಂಗಪ್ಪ ಕೊಂಚೆಟ್ಟಿ, ದಂಡಪ್ಪ, ಬಸವರಾಜಪ್ಪ ಗುರುಸುಣಿಗಿ, ಪಾಂಡು ಪೂಜಾರಿ, ಅಬ್ಬಣ್ಣ ಪೂಜಾರಿ, ಮರಿಲಿಂಗಪ್ಪ ಕೊಂಚೆಟ್ಟಿ, ಎ.ವೈ. ಪದ್ಮಾಕರ್, ಪರಶುರಾಮ, ಪಾಂಡುರಂಗ, ಬಸ್ಸಪ್ಪ ಕವಡಿಮಟ್ಟಿ, ರಾಯಪ್ಪ ಹಳಿಮನಿ, ಮರೆಪ್ಪ ಇತರರು ಇದ್ದರು. ಎಚ್.ಬಿ. ಪಾಟೀಲ್ ನಿರೂಪಿಸಿದರು.