ವಾಂತಿ- ಭೇದಿಗೆ ಜನ ತತ್ತರ
ಕನ್ನಡಪ್ರಭ ವಾರ್ತೆ, ಯಾದಗಿರಿ, ಮಾ.15
ಬೇಸಿಗೆ ಕಾಲಿಡುತ್ತಿದ್ದಂತೆ ಜಿಲ್ಲೆಯಲ್ಲಿ ಕುಡಿವ ನೀರಿಗೆ ಹಾಹಾಕಾರ ಪುಟಿದೇಳುತ್ತಿದೆ. ಜತೆಯಲ್ಲಿ ಕಲುಷಿತ ನೀರು ಸೇವನೆ ಪರಿಣಾಮ ಜನ ವಾಂತಿ-ಭೇದಿಯಿಂದ ಬಳಲುತ್ತಿರುವ ಪ್ರಕರಣಗಳೂ ಜಾಸ್ತಿಯಾಗಿದೆ. ಆದರೆ ಈ ಬಗ್ಗೆ ಲಕ್ಷ್ಯ ವಹಿಸಬೇಕಿದ್ದ ಇಲಾಖೆ ಅಧಿಕಾರಿಗಳು ಮಾತ್ರ ಎಸಿ ಕೊಠಡಿಯಲ್ಲಿ ಕುಳಿತಿದ್ದಾರೆ.
ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಈಗ ಕುಡಿವ ನೀರಿಗೆ ತತ್ವಾರವಾಗಿದೆ. ಬೋರ್ವೆಲ್ ಹಾಗೂ ತೆರೆದ ಬಾವಿಗಳಲ್ಲಿ ನೀರು ತಳ ಕಂಡಿದ್ದು, ಜನ ನೀರಿಗಾಗಿ ಪರದಾಡುತ್ತಿದ್ದಾರೆ. ನದಿ, ಕೊಳ್ಳಗಳ ಮರಳಿನಲ್ಲಿ ಹೊಂಡ ಮಾಡಿ ನೀರು ಸಂಗ್ರಹಿಸುತ್ತಿದ್ದಾರೆ. ಕಲುಷಿತ ನೀರು ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.
ತಾಲೂಕಿನ ಬಾಡಿಯಾಳ ಹಾಗೂ ಸಾವೂರು ಗ್ರಾಮಗಳ ನೂರಕ್ಕೂ ಹೆಚ್ಚು ಜನರು ಸದ್ಯ ವಾಂತಿ- ಭೇದಿಯಿಂದ ಬಳಲುತ್ತಿದ್ದಾರೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಅವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಸಿಗೆ ಆರಂಭವಾಗಿರುವುದರಿಂದ ಗ್ರಾಮಸ್ಥರಿಗೆ ಶುದ್ಧ ನೀರು ಸಿಗುತ್ತಿಲ್ಲ. ಗ್ರಾಮದ ಜನರು ಕಲುಷಿತ ನೀರು ಸೇವಿಸುತ್ತಿರುವುದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದೆ. ನಿತ್ಯವೂ ನಾಲ್ಕಾರು ಜನರು ಆಸ್ಪತ್ರೆ ಸೇರುವಂತಾಗಿದ್ದು, ಈ ಗ್ರಾಮಗಳ ಜನರಲ್ಲಿ ಆಂತಕ ಮನೆಮಾಡಿದೆ.
ಕಲುಷಿತ ನೀರು: ತಾಲೂಕಿನ ಬಾಡಿಯಾಳ ಗ್ರಾಮದಲ್ಲಿ ಕಳೆದ ಸುಮಾರು 15 ದಿನಗಳಿಂದಲೂ ವಾಂತಿ- ಭೇದಿ ಕಾಣಿಸಿಕೊಂಡಿದೆ. ಅದೇ ರೀತಿ ಸಾವೂರು ಗ್ರಾಮದಲ್ಲೂ 8 ದಿನಗಳ ಹಿಂದಿನಿಂದ ವಾಂತಿ- ಭೇದಿ ಪ್ರಕರಣ ಕಂಡುಬಂದಿದೆ. ಈ ಎರಡೂ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಆದ್ದರಿಂದ ಎಲ್ಲೆಂದರಲ್ಲಿ ನೀರು ಸಂಗ್ರಹಿಸಿ ಬಳಸುತ್ತಿರುವುದೇ ರೋಗ ಹರಡಲು ಕಾರಣ ಎಂದು ಹೇಳಲಾಗುತ್ತಿದೆ. ರೋಗ ಕಾಣಿಸಿಕೊಂಡ ಆರಂಭದಲ್ಲಿಯೇ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದಿದ್ದಾರೆ. ಆದರೆ ಆರೋಗ್ಯ ಅಧಿಕಾರಿಗಳೂ ಚಿಕಿತ್ಸೆ ನೀಡುವಿಕೆಯಲ್ಲಿ ನಿರ್ಲಕ್ಷ್ಯತನ ತೋರಿದ್ದಾರೆ ಎಂದು ಗ್ರಾಮಸ್ಥರಾದ ಪದ್ಮಮ್ಮ, ರವೀಂದ್ರ ಇತರರು ಆರೋಪಿಸುತ್ತಿದ್ದಾರೆ. ಶುದ್ಧ ಕುಡಿವ ನೀರು ಈ ಗ್ರಾಮಗಳ ಜನರಿಗೆ ಮರೀಚಿಕೆಯಾಗಿದೆ.
ಆಸ್ಪತ್ರೆ ತುಂಬಾ ಗ್ರಾಮಸ್ಥರು: ಬಾಡಿಯಾಳ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ವಾಂತಿ- ಭೇದಿಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದ ಕೆಲವರು ಚೇತರಿಸಿಕೊಳ್ಳುತ್ತಿದ್ದಾರೆ. ಸಾವೂರಿನ 80ಕ್ಕೂ ಹೆಚ್ಚು ಜನರು ಇದೇ ರೋಗದಿಂದ ಬಳಲುತ್ತಿದ್ದಾರೆ. ಆದ್ದರಿಂದ ಈ ಗ್ರಾಮಗಳಿಗೆ ಸಮೀಪದ ಸೈದಾಪುರ, ಮಲ್ಲಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರು ಚೇತರಿಸಿಕೊಳ್ಳುವುದರೊಳಗೆ ಮತ್ತಷ್ಟು ರೋಗಿಗಳು ಬರುತ್ತಿವೆ. ಆದ್ದರಿಂದ ಸೂಕ್ತ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಸ್ವಚ್ಛತೆ ಕೊರತೆ: ಗ್ರಾಮದಲ್ಲಿ ಸ್ವಚ್ಛತೆ ಕೊರತೆ ಎದುರಾಗಿದೆ. ಬೀದಿಗಳಲ್ಲಿನ ಚರಂಡಿಗಳು ತುಂಬಿಹೋಗಿದ್ದು, ತ್ಯಾಜ್ಯ ನೀರು ಕೊಳಚೆಯಾಗಿ ಮಾರ್ಪಟ್ಟಿವೆ. ಸೊಳ್ಳೆಗಳ ಕಾಟವೂ ವಿಪರೀತವಾಗಿದ್ದು, ರೋಗರುಜಿನಗಳ ಕೇಂದ್ರವಾಗಿ ಮಾರ್ಪಟ್ಟಿವೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಶುದ್ಧ ಕುಡಿವ ನೀರು ಪೂರೈಕೆ ಮಾಡುತ್ತಿಲ್ಲ. ಜನ ರೋಗದಿಂದ ಬಳಲುತ್ತಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸಲು ಗಮನ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಗ್ರಾಮಕ್ಕೆ ನೀರು ಪೂರೈಸುವ ಟ್ಯಾಂಕ್ ಶುದ್ಧ ಮಾಡದೇ ವರ್ಷಗಳೇ ಕಳೆದಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಕಾಲರಾ ಅಲ್ಲ: ನೂರಾರು ಜನರು ವಾಂತಿ- ಭೇದಿಯಿಂದ ಬಳಲುತ್ತಿರುವುದರಿಂದ ಜನರಲ್ಲಿ ಕಾಲರಾ ಭೀತಿ ಎದುರಾಗಿದೆ. ಆದರೆ ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಅವರನ್ನು ಕೇಳಿದಾಗ, ಬೇಸಿಗೆ ಆರಂಭದಲ್ಲಿ ಹಾಗೂ ಅಶುದ್ಧ ನೀರು ಸೇವನೆಯಿಂದ ವಾಂತಿ- ಭೇದಿ ಕಾಣಿಸಿಕೊಂಡಿದೆ. ಆದರೆ ಇದು ಕಾಲರಾ ಎಂದು ಅಲ್ಲ. ಇಲಾಖೆ ವೈದ್ಯರ ತಂಡ ಗ್ರಾಮಗಳಿಗೆ ಭೇಟಿ ನೀಡಿ ಆರೋಗ್ಯ ಸೇವೆ ನೀಡುತ್ತಿದೆ. ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಆದ್ದರಿಂದ ಜನ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೊಂದು ಕಡೆ ಕುಡಿಯುವ ನೀರಿನ ಹಾಹಾಕಾರ ಜೋರಾಗುತ್ತಿದೆ. ಶುದ್ಧ ನೀರು ಸಿಗದೇ ಜನ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಜನ ಆಸ್ಪತ್ರೆ ಸೇರುವ ಮುನ್ನವೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಶುದ್ಧ ಕುಡಿವ ನೀರು ಪೂರೈಕೆಯತ್ತ ಗಮನ ನೀಡಬೇಕಿದೆ.