ಕೇಂದ್ರದ ಅಂಗಳದಲ್ಲಿ ಎನ್ಆರ್ಎಲ್ಸಿ ನವೀಕರಣ ಚೆಂಡು
ಕನ್ನಡಪ್ರಭ ವಾರ್ತೆ ಹುಣಸಗಿ ಮಾ. 16
ಹುಣಸಗಿ: ಈ ಭಾಗದ ಲಕ್ಷಾಂತರ ರೈತರ ಜೀವನಾಡಿಯಾಗಿರುವ ನಾರಾಯಣಪುರ ಎಡದಂಡೆ ಕಾಲುವೆ, ಶಹಾಪುರ, ಜೇವರ್ಗಿ, ಇಂಡಿ, ಮುಡಬೋಳ ಸೇರಿದಂತೆ ವಿತರಣಾ ಕಾಲುವೆಗಳ ಅಧುನೀಕರಣಕ್ಕೆ ರಾಜ್ಯ ಸರ್ಕಾರ 3 ಸಾವಿರ ಕೋಟಿಯ ಯೋಜನೆ ತಯಾರಿಸಿ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದೆ. ಅಲ್ಲಿ ಒಪ್ಪಿಗೆ ದೊರೆತಲ್ಲಿ ಯೋಜನೆ ಶೀಘ್ರ ಅನುಷ್ಠಾನಗೊಳ್ಳಲಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಎಡದಂಡೆ ಕಾಲುವೆ, ಅದರಡಿಯ ಕಾಲುವೆ ಜಾಲದ ವಿಸ್ತರಣೆ, ಆಧುನೀಕರಣ ಹಾಗೂ ನೀರು ಬಳಕೆ ಸಾಮರ್ಥ್ಯ ಅಭಿವೃದ್ಧಿ (ವಾಟರ್ ಯೂಸ್ ಎಫಿಸಿಯನ್ಸಿ)ಗೆ 3 ಸಾವಿರ ಕೋಟಿ ಯೋಜನೆಯ ಆಡಳಿತಾತ್ಮಕ ಅನುಮೋದನೆಗೆ ಕರ್ನಾಟಕ ಸರ್ಕಾರ ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.
ಇದೇ ಕಾರಣಕ್ಕಾಗಿ ಸತತ ಎರಡು ವರ್ಷದಿಂದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ಮೋಹನ್ ಅವರು ಸಚಿವ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ಕೃಷ್ಣಾ ಅಚ್ಚುಕಟ್ಟಿನಲ್ಲಿ ಇನ್ನೂ ನಾಲ್ಕೈದು ದಶಕಗಳವರೆಗೆ ಕಾಲುವೆ ಎಲ್ಲಿಯೂ ಕುಸಿಯದಂತೆ ಗುಣಮಟ್ಟದ ಕಾಲುವೆ ನಿರ್ಮಾಣ ಹಾಗೂ ರೈತರು ನಿರಾಳವಾಗಿ ಕೃಷಿಯ ಬದುಕನ್ನು ನಡೆಸುವಂತಾಗಲು ಈ ಯೋಜನೆ ಅನುಮೋದನೆಗೆ ಶ್ರಮಿಸುತ್ತಿದ್ದಾರೆ.
ಕಮಿಷನ್ ದಂಧೆ- ಆರೋಪ: ಯೋಜನೆಗೆ ಕೇಂದ್ರ ಸರ್ಕಾರದ ಆಡಳಿತಾತ್ಮಕ ಒಪ್ಪಿಗೆ ಅಗತ್ಯವಾಗಿದೆ. ಆದರೆ ಈ ವಿಷಯ ಗೊತ್ತಿಲ್ಲದ ಮುಗ್ಧ ರೈತರು ಯಾರೋ ಆಡಿದ ಮಾತನ್ನು ನಂಬಿ ಆರೋಪ ಮಾಡುತ್ತಿದ್ದಾರೆ. ಕಾಲುವೆ ನವೀಕರಣದ ಹೆಸರಿನಲ್ಲಿ ಕಮಿಷನ್ ದಂಧೆಗೆ ನೀರಾವರಿ ಅಧಿಕಾರಿಗಳು, ಸಚಿವರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಇದರಿಂದ ನಮಗೆ ಕಳೆದ ಬಾರಿಯಂತೆ ಸಾವಿರಾರು ಕೋಟಿ ಹಾನಿ ಸಂಭವಿಸಿದೆ. ರೈತರ ಆಹಾರ ಉತ್ಪಾದನೆ, ಆರ್ಥಿಕ ಪ್ರಗತಿಯಲ್ಲಿ ನಮಗೆ ಹಿನ್ನೆಡೆ ಉಂಟು ಮಾಡಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಕಾಲುವೆಗೆ ಹಾನಿಯಾಗಿಲ್ಲ: ಇನ್ನು ಕೆಲವರು ಬರುವ ಬೇಸಿಗೆಯಲ್ಲಿ ಕಾಲುವೆ ನೀರು ಹರಿಯುವುದು ನಿಂತ ಕೂಡಲೇ, ಕಳೆದ ಹಲವು ವರ್ಷಗಳ ಪರಿಪಾಠದಂತೆ, ಮತ್ತೆ ಕಾಲುವೆ ಒಡೆಯದಿದ್ದರೆ ಕೇಳಿ ಎಂದೂ ಹೇಳಿದ್ದರು. ಆದರೆ ಎಂಜಿನಿಯರುಗಳ ಸತತ ಪರಿಶ್ರಮದ ಫಲವಾಗಿ ಕಾಲುವೆಯಲ್ಲಿ ನೀರು ಹರಿಯವುದು ನಿಂತ ಕೂಡಲೇ ನವೀಕರಣಗೊಂಡ ಕಾಲುವೆಯನ್ನು ಅಮೂಲಾಗ್ರವಾಗಿ ಪರಿಶೀಲಿಸಿದರೆ ಎಲ್ಲಿಯೂ ಕಾಲುವೆಗೆ ಹಾನಿಯಾದ ಉದಾಹರಣೆ ಕಂಡು ಬಂದಿಲ್ಲ.
ಆದ್ದರಿಂದ ರೈತರಿಗೆ ಈಗ ಉತ್ತಮ ಗುಣಮಟ್ಟದ ಕಾಮಗಾರಿ ಆಗಿರುವುದು ಖಾತ್ರಿಯಾಗಿದೆ. ಆದ್ದರಿಂದ 78 ಕಿಮೀ ಕಾಲುವೆಯಲ್ಲಿ ಕೇವಲ 24 ಕಿಮೀ ಮಾತ್ರ ದುರಸ್ತಿ ಮಾಡಿದ್ದಾರೆ. ಉಳಿದದ್ದನ್ನು ಯಾವಾಗ ಮಾಡುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.
21ರಂದು ಸಭೆ: ಮಾ.21ರಂದು ನವದೆಹಲಿಯ ಕೇಂದ್ರ ಜಲ ಆಯೋಗ ಭವನದಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸಭೆಯು ನಡೆಯಲಿದೆ ಎಂದು ತಿಳಿದು ಬಂದಿದೆ. ಅಲ್ಲಿ ಕೃಷ್ಣಾ ಅಚ್ಚುಕಟ್ಟು ಕಾಲುವೆ ಜಾಲದ, ಹಲವು ಮುಖಗಳ ವ್ಯಾಪಕ ಚರ್ಚೆ ನಡೆಯಲಿದೆ.
ಒಟ್ಟು ಕಾಲುವೆ ನವೀಕರಣದಿಂದ ಪರಿಸರ ಹಾನಿ, ಬುಡಕಟ್ಟು ಜನಾಂಗದ ವಸತಿಯವರಿಗೆ ಯಾವುದಾದರೂ ತೊಂದರೆ ಆಗುವುದೇ, ಅಂತಾರಾಜ್ಯ ಜಲ ವಿತರಣೆಯಲ್ಲಿ ಎನಾದರೂ ಸಮಸ್ಯೆ ಉದ್ಭವಿಸುವುದೇ, ನೂರು ವರ್ಷಗಳ ಮಳೆಯ ಸರಾಸರಿ ಪರಾಮರ್ಶೆ, ಕಾಲುವೆ ನವೀಕರಣದಿಂದ ಅಲ್ಲಿಯ ಜನರ ಆರ್ಥಿಕ ಸ್ಥಿತಿಯಲ್ಲಿ ಆಗುವ ಅಭಿವೃದ್ಧಿ, ಆಹಾರ ಉತ್ಪಾದನೆಯಲ್ಲಿ ಆಗುವ ಏರಿಕೆ, ನೀರಿನ ಪೋಲು ತಡೆಯುವುದು, ಕಾಲುವೆ ಕೊನೆ ಭಾಗಕ್ಕೂ ನೀರು ಪೂರೈಸುವುದು ಸೇರಿದಂತೆ ವಿವಿಧ ಮಜಲುಗಳ ಬಗ್ಗೆ ಚರ್ಚೆ ನಡೆಯಲಿದೆ. ಆದ್ದರಿಂದ ಯೋಜನೆಗೆ ಈ ಸಭೆಯಲ್ಲಿ ಒಪ್ಪಿಗೆ ಸಿಗುವ ಭರವಸೆಯನ್ನು ಅಧಿಕಾರಿಗಳು ಹೊಂದಿದ್ದಾರೆ.
ಖರ್ಗೆ, ಧರಂ ಮೇಲೆ ಭರವಸೆ: ಇಷ್ಟಾದ ಮೇಲೆ ಈ ಚೆಂಡು ಮುಂದಿನ ಹಂತವಾಗಿ ಯೋಜನಾ ಆಯೋಗದ ಯೋಜನಾ ಭವನಕ್ಕೆ ಬರುತ್ತದೆ. ನಂತರ ಅಲ್ಲಿಂದ ಹಣಕಾಸು ಇಲಾಖೆ ಅನುಮೋದನೆಗೆ ಈ ಫೈಲು ತಲುಪುಲಿದೆ. ಅಲ್ಲಿ ಹಸಿರು ನಿಶಾನೆ ಸಿಕ್ಕ ನಂತರ, ನಮ್ಮಲ್ಲಿ ಕಾಲುವೆ ನವೀಕರಣ ಆರಂಭವಾಗುತ್ತದೆ. ಇದಕ್ಕೆ ಈ ಭಾಗದ ಮುಖಂಡರ ರಾಜಕೀಯ ಇಚ್ಛಾಶಕ್ತಿಯಂತೂ ಬೇಕೇ ಬೇಕು. ಆದ್ದರಿಂದ ಖರ್ಗೆ ಹಾಗೂ ಧರಂಸಿಂಗ್ ಮೇಲೆ ಈ ಭಾಗದ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರಿಂದ ಮತ್ತೊಂದು ಬಾರಿ ಸಿಂದಗಿ, ಇಂಡಿ, ಜೇವರ್ಗಿ, ಶಹಾಪುರ, ಸುರಪುರ ತಾಲೂಕಿನ 6 ಲಕ್ಷ ಎಕರೆ ಪ್ರದೇಶಗಳ ಭೂಮಿಗೆ ನೀರು ನಿರಾತಂಕವಾಗಿ ಹರಿಯಲಿದೆ. ಆದ್ದರಿಂದ ಕೇಂದ್ರದ ನಾಯಕರು ಯೋಜನೆಗೆ ಅನುಮೋದನೆ ದೊರೆಯುವಂತೆ ಮಾಡಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಬೇಕಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.