ಜೇವರ್ಗಿಗೆ ಇಂದು ಸಿಎಂ ಶೆಟ್ಟರ್
ಗುಲ್ಬರ್ಗ: ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಅವರು ಮಾ.19 ರಂದು ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿಗೆ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಜೇವರ್ಗಿಯಲ್ಲಿ ನಿರ್ಮಾಣವಾಗಿರುವ ಮಿನಿ ವಿಧಾನಸೌಧ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಮಾ.19ರ ಬೆಳಗ್ಗೆ 10ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಜಕ್ಕೂರು ಏರೋ ಡ್ರೋಂ ಬಿಟ್ಟು, ಕೊಪ್ಪಳ ಜಿಲ್ಲೆಗೆ ಆಗಮಿಸುವರು. ಅಲ್ಲಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ, ಮಧ್ಯಾಹ್ನ 1ಕ್ಕೆ ಕೊಪ್ಪಳದ ಗಿಣಿಗೇರಾ ಏರ್ಸ್ಟ್ರಿಪ್ ಹೆಲಿಪ್ಯಾಡ್ನಿಂದ ಹೊರಟು ಮಧ್ಯಾಹ್ನ 2ಕ್ಕೆ ಜೇವರ್ಗಿ-ಬಿಜಾಪುರ ರಸ್ತೆ ಸಮೀಪದ ಹೆಲಿಪ್ಯಾಡ್ (ಜೇವರ್ಗಿ ಹೆಲಿಪ್ಯಾಡ್)ಗೆ ಆಗಮಿಸುವರು.
ಜೇವರ್ಗಿಯಲ್ಲಿ ಜೇವರ್ಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಲಾಗಿರುವ ಮಿನಿ ವಿಧಾನಸೌಧ, ನೂತನ ಬಸ್ನಿಲ್ದಾಣದ ಉದ್ಘಾಟನೆ ಹಾಗೂ ರಸ್ತೆ ಕಾಮಗಾರಿಗಳು, ಸೇತುವೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ನಂತರ ಅವರು ಮಧ್ಯಾಹ್ನ 3.30ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಸರ್ಕಾರದ ಜಂಟಿ ಕಾರ್ಯದರ್ಶಿ ಹಾಗೂ ಪದ ನಿಮಿತ್ತ ಮುಖ್ಯ ಮಂತ್ರಿಯವರ ಆಪ್ತ ಕಾರ್ಯದರ್ಶಿ ಡಾ. ವಿಜಯಕುಮಾರ್ ಎನ್. ತೋರಗಲ್ ತಿಳಿಸಿದ್ದಾರೆ.